ದೊಡ್ಡಬಳ್ಳಾಪುರ : ಲಾಕ್‌ಡೌನ್ ಸಡಿಲಿಕೆ ನಂತರ ಬೇಕರಿ,ಹೋಟೆಲ್ ಸೇರಿದಂತೆ ಹಲವಾರು ಅಂಗಡಿಗಳ ಬಾಗಿಲು ತೆರೆದು ವ್ಯಾಪಾರ ವಹಿವಾಟು ಆರಂಭಿಸಿವೆ. ಹೀಗಾಗಿ ಈ ಎಲ್ಲಾ ಅಂಗಡಿಗಳಿಗೆ ಜಿಲ್ಲಾ ಆಹಾರ ಸುರಕ್ಷತ ಅಧಿಕಾರಿ ಡಾ.ಶಿವರಾಜ ಹೆಡೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅವರು ಬಗ್ಗೆ ಮಾಹಿತಿ ನೀಡಿ, 50 ದಿನಗಳ ಕಾಲ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿ ಇದ್ದಾಗ ಎಲ್ಲಾ ಬೇಕರಿ ಸೇರಿದಂತೆ ತಿಂಡಿ,ತಿನಿಸುಗಳನ್ನು ಮಾರಾಟ ಮಾಡುವ ಅಂಗಡಿಗಳ ಬಾಗಿಲು ಮುಚ್ಚಲಾಗಿತ್ತು. ಈ ಸಂದರ್ಭದಲ್ಲಿ ಉಳಿದಿದ್ದ ಆಹಾರ ಪದಾರ್ಥಗಳು ಹಾಗೂ ಪ್ಯಾಕ್ ಮಾಡಲಾಗಿರುವ ತಿಂಡಿಗಳ ದಿನಾಂಕ, ಬಾಳಿಕೆಯ ಅವಧಿ ಇತರೆ ನಿಯಮಗಳ ಆಧಾರದ ಮೇಲೆ ಪರಿಶೀಲನೆ ನಡೆಸಲಾಗುತ್ತಿದೆ. ಬೇಕರಿಗಳಲ್ಲಿ ಮೈದಾ ಹಿಟ್ಟಿನಿಂದ ಈ ಹಿಂದೆ ತಯಾರಿಸಿರುವ ಯಾವುದೇ ತಿಂಡಿಗಳನ್ನು ಮಾರಾಟ ಮಾಡದಂತೆ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ. ಇದರ ಪಾಲನೆ ಯಾವ ರೀತಿ ನಡೆಯುತ್ತಿದೆ ಎನ್ನುವುದರ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಜನರು ಕೊರೊನಾ ವೈರಸ್ ಸೋಂಕಿನ ಆತಂಕದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಬೇಕರಿಯಲ್ಲಿನ ಹಾಗೂ ಇತರೆ ತಿಂಡಿಗಳನ್ನು ತಿಂದು ಆರೋಗ್ಯ ಹಾಳಾದರೆ ಮತ್ತಷ್ಟು ಸಮಯಸ್ಯೆ ಉಂಟಾಗಲಿದೆ. ಹೀಗಾಗಿ ಪ್ರತಿಯೊಂದು ಬೇಕರಿ, ಕುರುಕಲು ತಿಂಡಿಗಳ ತಯಾರಿಕೆ ಘಟಕಗಳು, ಮಾರಾಟದ ಅಂಗಡಿಗಳಿಗೂ ಭೇಟಿ ನೀಡಿ ಆಹಾರ ಸುರಕ್ಷತಾ ನಿಯಮಗಳ ಪಾಲನೆಯ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.