ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈಧ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಮಂಗಳವಾರ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟನೆ ನಡೆಸಿ ತಾಲ್ಲೂಕು ವೈದ್ಯಾಧೀಕಾರಿ ಡಾ.ಪರಮೇಶ್ವರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಬಗ್ಗೆ ಮಾಹಿತಿ ನೀಡಿದ,ಸಂಘದ ತಾಲ್ಲೂಕು ಪಾಧಿಕಾರಿಗಳಾದ ಡಾ.ಹರಿಪ್ರಸಾದ್,ಡಾ.ಸುರುಚಿ, ಡಾ.ಗಂಗಾ,ಡಾ.ಪದ್ಮ,ಡಾ.ವಸುದಾ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವವರು 2019ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಧರಣಿ ನಡೆಸಿದಾಗ ನೀಡಲಾಗಿದ್ದ ಯಾವುದೇ ಭರವಸೆಗಳು ಇಲ್ಲಿಯವರೆಗೂ ಈಡೇರಿಸಿಲ್ಲ. ಕೋವಿಡ್-19 ಸಂದರ್ಭದಲ್ಲಿ ನಮ್ಮ ಆರೋಗ್ಯವನ್ನು ಲಕ್ಷ್ಯ ಮಾಡದೆ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಆದರೆ ನಮ್ಮ ಬೇಡಿಕೆಗಳ ಕಡೆಗೆ ಮಾತ್ರ ಸರ್ಕಾರ ಗಮನ ನೀಡುತ್ತಿಲ್ಲ ಎಂದರು.
ರಾಜ್ಯ ಸರ್ಕಾರದ ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ಶೇಕಡಾವಾರು ಹೆಚ್ಚಿಸಬೇಕು ಮತ್ತು ಈ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಿ ಇದಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರವು ನೀಡಬೇಕು. ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿಗೆ ಆದ್ಯತೆ ನೀಡಬೇಕು. ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆಯನ್ನು ನೀಡಿ ಖಾಯಂಗೊಳಿಸಬೇಕು. ಎಲ್ಲಾ ಹುದ್ದೆಗಳನ್ನು ಖಾಯಂ ಹುದ್ದೆಗಳಾಗಿ ಸೃಷ್ಠಿಸಬೇಕು. ಆರೋಗ್ಯ ಭಾಗ್ಯ ಯೋಜನೆಯನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೂ ವಿಸ್ತರಿಸಬೇಕು. ಹೊರಗುತ್ತಿಗೆಯಲ್ಲಿರುವ ಎಲ್ಲಾ ನೌಕರರಿಗೂ ಗುತ್ತಿಗೆದಾರರ ಮಧ್ಯವರ್ತಿತನ ಇಲ್ಲದೆ ನೇರವಾಗಿ ಇಲಾಖೆಯಿಂದಲೇ ವೇತನ ಪಾವತಿ ಮಾಡಬೇಕು ಮತ್ತು ಒಳಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸಿಗುವ ಸೌಲಭ್ಯಗಳು ಹೊರಗುತ್ತಿಗೆ ನೌಕರರಿಗೂ ಸಹ ದೊರೆಯಬೇಕು ಎನ್ನುವ ಬೇಡಿಕೆಯು ಸೇರಿದಂತೆ ಇನ್ನು ಹಲವಾರು ಒತ್ತಾಯಗಳನ್ನು ಮನವಿ ಪತ್ರದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.