ದೊಡ್ಡಬಳ್ಳಾಪುರ : ಜಲ ಸಂರಕ್ಷಣೆ, ಜಲ ಸಾಕ್ಷರತೆ, ಜಲ ಮೂಲಗಳ ಪುನಶ್ಚೇತನ ಮತ್ತು ಹಸಿರೀಕರಣವನ್ನು ಕೇಂದ್ರವಾಗಿಟ್ಟುಕೊಂಡು ನೀರಿನ ಸಂರಕ್ಷಣೆಗೆ ಆದ್ಯತೆ ನೀಡುವ ಜಲಾಮೃತ ಯೋಜನೆಯ ಯಶಸ್ಸಿಗೆ ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್. ನಾಗರಾಜ ಅವರು ತಿಳಿಸಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಇಂದು ಜಲಾನಯನ ಅಭಿವೃದ್ಧಿ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾದ ಜಲಾಮೃತ ಕಾರ್ಯಾಗಾರವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಜಿಪಂ ಸಿಇಓ ಎಂ.ಎನ್.ನಾಗರಾಜು ಅವರು ನೀರಿನ ಸಮಸ್ಯೆಯನ್ನು ಮೂಲದಿಂದ ನಿವಾರಿಸುವ ಸಲುವಾಗಿ ಜಲಾಮೃತ ಯೋಜನೆ ಜಾರಿಗೆ ತರಲಾಗಿದ್ದು, ಕೃಷಿ ಚಟುವಟಿಕೆ ಹೆಚ್ಚಾಗಿ ಕಂಡುಬರುವ ಗ್ರಾಮೀಣ ಪ್ರದೇಶದಲ್ಲಿ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಜಲಾಮೃತ ಯೋಜನೆಯ ಒಗ್ಗೂಡಿಸುವಿಕೆಯಡಿ ಗ್ರಾಮದ ಜನರನ್ನೇ ಬಳಸಿಕೊಂಡು ಜಲ ಸಂರಕ್ಷಣೆಯ ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಲಾಮೃತ ಯೋಜನೆಯಡಿ ನೀರಿನ ವಿವಿಧ ರೀತಿಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದ್ದು, ಪ್ರಮುಖವಾಗಿ ಜಲ ಸಾಕ್ಷರತೆ ಮುಖೇನ ಜನರಲ್ಲಿ ನೀರಿನ ಮಿತ ಹಾಗೂ ಪ್ರಜ್ಞಾವಂತ ಬಳಕೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದ ಅವರು, ಜಲ ಮೂಲಗಳನ್ನು ಪುನಶ್ಚೇತನ ಮಾಡುವ ಕಾರ್ಯಕ್ರಮದಡಿ ಕೊಳವೆಬಾವಿಗಳ ಮರುಪೂರಣ, ಕೆರೆಗಳ ಹೂಳೆತ್ತುವಿಕೆ, ನೂತನ ಕೆರೆ, ಚೆಕ್‍ಡ್ಯಾಂ, ಕಲ್ಯಾಣಿ ಕೊಳಗಳ ನಿರ್ಮಾಣ, ಗೋ ಕಟ್ಟೆಗಳ ನಿರ್ಮಾಣದಂತಹ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ನೀರಿನ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಾಲ ಕಾಲಕ್ಕೆ ನೀರಿನ ಸ್ಥರಗಳ ಸ್ವಚ್ಛತಾ ಕಾರ್ಯವನ್ನು ಜಲಾಮೃತ ಯೋಜನೆಯಡಿ ಮಾಡಲಾಗುವುದು. ಹಸಿರೀಕರಣದ ಮುಖೇನ ಮರಗಳನ್ನು ಹೆಚ್ಚೆಚ್ಚು ಬೆಳೆಸುವ ಮಹತ್ತರ ಕಾರ್ಯವನ್ನೂ ಕೈಗೊಳ್ಳಲಾಗಿದೆ ಎಂದು ಜಲಾಮೃತ ಯೋಜನೆಯ ಮಹತ್ವವನ್ನು ಅಧಿಕಾರಿಗಳಿಗೆ ತಿಳಿಸಿದರು.
ಜಲಾಮೃತ ಯೋಜನೆಯಡಿ ಜಿಲ್ಲೆಯಲ್ಲಿ ಸಮಗ್ರ ಹಸಿರೀಕರಣ ಕಾರ್ಯಕ್ರಮವನ್ನು ಸಮುದಾಯದ ಪಾಲ್ಗೊಳ್ಳುವಿಕೆಯೊಂದಿಗೆ ಅಂದಾಜು 60 ಸಾವಿರ ಸಸಿಗಳನ್ನು ನೆಡಿಸಲು ಕಾರ್ಯ ರೂಪಿಸಲಾಗಿದೆ. ಸಾಂಪ್ರದಾಯಿಕ ಜಲಮೂಲಗಳನ್ನು ಗುರುತಿಸಲಾಗಿದ್ದು, ಆಯಾ ಗ್ರಾಮ ಪಂಚಾಯತಿಗಳ ಮೂಲಕ ಪುನಶ್ಚೇತನ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಜಲಾಮೃತ ಯೋಜನೆಯಡಿ ಪ್ರಮುಖ ಕೆರೆಗಳನ್ನು ಆಯ್ಕೆ ಮಾಡಲಾಗಿದ್ದು, ಕೆರೆಗಳ ಅಗತ್ಯತೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುವುದು. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಗುಳ್ಯ ನಂದಿಗುಂದ, ಕೊಡಿಗೇಹಳ್ಳಿ, ಕೊನಘಟ್ಟ, ಕುರುಬರಹಳ್ಳಿ , ರಬ್ಬನಹಳ್ಳಿ ಮತ್ತು ಲಿಂಗನಹಳ್ಳಿ ಯನ್ನು ಕಿರು ಜಲಾನಯನ ಯೋಜನೆ ಅನುಷ್ಠಾನಗೊಳಿಸಲು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ನೆಲಮಂಗಲ ತಾಲೂಕಿನ ಹೊನ್ನಸಂದ್ರ, ಲಿಂಗೇನಹಳ್ಳಿ, ಮಹದೇವಪುರ, ದೊಡ್ಡೇಕರೇನಹಳ್ಳಿ ಮತ್ತು ಬಾವಿಕೆರೆ ಹಾಗೂ ಹೊಸಕೋಟೆ ತಾಲ್ಲೂಕಿನ ಕಟ್ಟಿಗೇನಹಳ್ಳಿ.ಮಾಕನಹಳ್ಳಿ, ತಿಂಡ್ಲು, ದಾಸರಹಳ್ಳಿ ಹಂದೇನಹಳ್ಳಿ, ಮಾರಸಂದ್ರ ನಾರಾಯಣ ಕೆರೆ, ಪರಾಮನಹಳ್ಳಿ, ಖಾಜಿ ಹೊಸಳ್ಳಿ ಯನ್ನು ಕಿರು ಜಲಾನಯನ ಕಾಮಗಾರಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಕೆ.ಕರಿಯಪ್ಪ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಯಸ್ವಾಮಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ್ ಮುರುಗೋಳ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.