ದೊಡ್ಡಬಳ್ಳಾಪುರ : ಅಂಗನವಾಡಿ, ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಸಿದ ಹೋರಾಟದ ಮಾದರಿಯಲ್ಲಿಯೇ ನೇಕಾರರು, ನೇಕಾರಿಯಲ್ಲಿ ತೊಡಗಿರುವ ಕಾರ್ಮಿಕರು ಬೃಹತ್ ಮಟ್ಟದಲ್ಲಿ ಧರಣಿ ನಡೆಸದ ಹೊರತು ನ್ಯಾಯಪಡೆಯಲು ಸಾಧ್ಯವೇ ಇಲ್ಲದಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ಅವರು ಬುಧವಾರ ನಗರದ ಕನ್ನಡ ಜಾಗೃತ ಪರಿಷತ್ನಲ್ಲಿ ಪಕ್ಷಾತೀತವಾಗಿ ರಚನೆಯಾಗಿರುವ ನೇಕಾರರ ಹಿತರಕ್ಷಣಾ ಸಮಿತಿ ವತಿಯಿಂದ ನಡೆದ ಸಭೆಯಲ್ಲಿ ಮಾತನಾಡಿದರು.
ಲಾಕ್ಡೌನ್ ಜಾರಿಯಾದ ನಂತರ ವಿದ್ಯುತ್ ಮಗ್ಗಗಳನ್ನು ಹೊಂದಿರುವ ನೇಕಾರರು, ನೇಕಾರಿಕೆಯಲ್ಲಿ ತೊಡಗಿರುವ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮುಖ್ಯಮಂತ್ರಿಗಳು,ಜವಳಿ ಸಚಿವರಿಂದ ಮೊದಲುಗೊಂಡು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಸಚಿವರಿಗೂ ಮನವಿಗಳನ್ನು ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ. ನೇಕಾರಿಕೆ ಅಂದರೆ ಕೈಮಗ್ಗಗಳನ್ನು ಹೊಂದಿರುವವರು ಮಾತ್ರ ಎನ್ನುವಂತೆ ಸರ್ಕಾರ ವರ್ತಿಸುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಆರ್ಥಿಕ ಪ್ಯಾಕೇಜ್ನಲ್ಲಿ ವಿದ್ಯುತ್ ಮಗ್ಗಗಳನ್ನು ಹೊಂದಿರುವ ನೇಕಾರರಿಗೆ, ನೇಕಾರಿಕೆಯಲ್ಲಿ ತೊಡಗಿರುವ ಕಾರ್ಮಿಕರಿಗೆ ಯಾವುದೇ ರೀತಿಯ ಪ್ರಯೋಜನೆಗಳು ಇಲ್ಲದಾಗಿದೆ. ನೇಕಾರರ ಹಿತರಕ್ಷಣಾ ಹೋರಾಟ ಸಮಿತಿಯಿಂದ ರೂಪಿಸುವ ಎಲ್ಲಾ ರೀತಿಯ ಹೋರಾಟಗಳಿಗು ನಮ್ಮ ಬೆಂಬಲ ಇದೆ ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರಾದ ಬಿ.ಮುನೇಗೌಡ, ಆರ್.ಚಂದ್ರತೇಜಸ್ವಿ, ಟಿ.ಎನ್.ಪ್ರಭುದೇವ್,ಬಿ.ಜಿ.ಹೇಮಂತ್ ರಾಜ್, ಸಂಜೀವ್ ನಾಯಕ್,ಕೆ.ಪಿ.ಜಗನ್ನಾಥ್, ಪಿ.ಎ.ವೆಂಕಟೇಶ್ ಮಾತನಾಡಿ, ನಗರದ ಇಡೀ ಆರ್ಥಿಕ ಸ್ಥಿತಿ ನಿಂತಿರುವುದೇ ವಿದ್ಯುತ್ ಮಗ್ಗಗಳ ನೇಕಾರಿಕೆ ಮೇಲೆ. ನೇಕಾರಿಯನ್ನು ನಂಬಿ ಸಾವಿರಾರು ಕುಟುಂಬಗಳು ಜೀವನ ಮಾಡುತ್ತಿವೆ. ಲಾಕ್ಡೌನ್ ಜಾರಿಯಿಂದ ಸೀರೆಗಳು ಮಾರಾಟವಾಗದೇ ನೇಕಾರಿಕೆ ಉದ್ಯಮವೇ ಸ್ಥಗಿತಗೊಂಡಿದೆ. ನೇಕಾರಿಕೆಯಲ್ಲಿ ತೊಡಗಿರುವ ಕಾರ್ಮಿಕರನ್ನು ಅಸಂಘಟಿತ ವಲಯಕ್ಕೆ ಸೇರಿಸುವ ಮೂಲಕ ರಾಜ್ಯ ಸರ್ಕಾರ ಆರ್ಥಿಕ ನೆರವಿನ ಪ್ಯಾಕೇಜ್ ಸೌಲಭ್ಯ ದೊರೆಯುವಂತೆ ಮಾಡಬೇಕು. ಇಲ್ಲವಾದರೆ ಪಕ್ಷಾತೀತವಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಮೇ.18 ರಂದು ಧರಣಿ: ವಿದ್ಯುತ್ ಮಗ್ಗಗಳ ನೇಕಾರರ, ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.