ದೊಡ್ಡಬಳ್ಳಾಪುರ : ಕೋವಿಡ್-19 ಲಾಕ್ ಡೌನ್ ಪರಿಸ್ಥಿತಿಯಲ್ಲಿ, ಸಿಂಗಾಪೂರ್ ನಿಂದ ಬುಧವಾರ ರಾತ್ರಿ 9.30 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೇವನಹಳ್ಳಿಯಲ್ಲಿರುವ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೂರನೇ ವಿಮಾನದಲ್ಲಿ ಗರ್ಭಿಣಿಯರು, ಮಕ್ಕಳು ಸೇರಿದಂತೆ ಒಟ್ಟು 152 ಮಂದಿ ಅನಿವಾಸಿ ಭಾರತೀಯರು ಪ್ರಯಾಣಿಸಿದ್ದಾರೆ.
ಏರ್ ಇಂಡಿಯಾ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಒಟ್ಟು 152 ಮಂದಿ ಪ್ರಯಾಣಿಕರಲ್ಲಿ (78 ಪುರುಷರು ಹಾಗೂ 74 ಮಹಿಳೆಯರು) 131 ಮಂದಿ ಪ್ರಯಾಣಿಕರು ಕರ್ನಾಟಕದವರಾಗಿದ್ದಾರೆ. 12 ಮಂದಿ ಪ್ರಯಾಣಿಕರು ತಮಿಳುನಾಡು, 07 ಮಂದಿ ಪ್ರಯಾಣಿಕರು ಆಂಧ್ರಪ್ರದೇಶ, ಒಬ್ಬರು ತೆಲಂಗಾಣ ಹಾಗೂ ಒಬ್ಬರು ಮಹಾರಾಷ್ಟ್ರ ರಾಜ್ಯದವರಾಗಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ, ಆರೋಗ್ಯ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ವತಿಯಿಂದ ಆಗಮಿಸಿದ ಪ್ರಯಾಣಿಕರಿಗೆ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳಿಂದ ಆರೋಗ್ಯ ತಪಾಸಣೆಗೊಳಪಡಿಸಿ ಕ್ವಾರಂಟೈನ್ ಗಾಗಿ ಹೋಟೆಲ್ ಗಳಿಗೆ ಬಿಎಂಟಿಸಿ ಬಸ್ ಗಳ ಮೂಲಕ ಕಳುಹಿಸಿಕೊಡಲಾಗಿದ್ದು, ಕ್ವಾರಂಟೈನ್ ವೆಚ್ಚವನ್ನು ಪ್ರಯಾಣಿಕರೇ ಭರಿಸಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.