ದೊಡ್ಡಬಳ್ಳಾಪುರ : ಲಾಕ್ ಡೌನ್ ಜಾರಿಯಿಂದಾಗಿ ಹೂವು ಬೆಳೆದ ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರವಾಗಿ ಪ್ರತಿ ಹೆಕ್ಟೇರ್ಗೆ ರೂ25,000ಗಳಂತೆ ಪರಿಹಾರಧನ ನೀಡಲು ರಾಜ್ಯ ಸರ್ಕಾರದ ಆದೇಶದ ಅನ್ವಯ ಹೂವು ಬೆಳೆಗಾರ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ದಾರೆ.
ಅವರು ಈ ಬಗ್ಗೆ ಮಾಹಿತಿ ನೀಡಿ, ರೈತರು ಬೆಳೆದಿರುವ ಹೂವು ಬೆಳೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಗರಿಷ್ಠ ಒಂದು ಹೆಕ್ಟೇರ್ ವಿಸ್ತೀರ್ಣಕ್ಕೆ ಮಿತಿಗೊಳಿಸಿ ಪರಿಹಾರವನ್ನು ನೀಡಲಾಗುತ್ತಿದೆ. 2019-20ನೇ ಸಾಲಿನಲ್ಲಿ ಕೈಗೊಳ್ಳಲಾದ ಬೆಳೆ ಸಮೀಕ್ಷೆ ಮಾಹಿತಿಯ ಆಧಾರಿಸಿ ಹೂವು ಬೆಳೆಗಾರರಿಗೆ ಪರಿಹಾರ ನೀಡಲಾಗುವುದು. ಹಿಂಗಾರು ಬೆಳೆ ಸಮೀಕ್ಷೆ ಮತ್ತು ಬಹುವಾರ್ಷಿಕ ಹೂ ಬೆಳೆಗಳಿಗೆ (ಗುಲಾಬಿ, ಕನಕಾಂಬರ, ಗ್ಲಾಡಿಯೋಲಸ್, ಬರ್ಡ್ ಆಫ್ ಪ್ಯಾರೆಡೈಸ್ ಇತ್ಯಾದಿ) ಮುಂಗಾರು ಬೆಳೆ ಸಮೀಕ್ಷೆಯ ಮಾಹಿತಿಯನ್ನು ಆಧಾರವಾಗಿರಿಸಿಕೊಂಡು ಪರಿಹಾರ ನೀಡಲಾಗುವುದು.
ಬೆಳೆ ಸಮೀಕ್ಷೆಯಲ್ಲಿ ಇರುವಂತೆ ಹೂ ಬೆಳೆಗಾರರ ಪಟ್ಟಿಯನ್ನು ಗ್ರಾಮ ಪಂಚಾಯಿತಿ ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ತೋಟಗಾರಿಕೆ ಕಚೇರಿಯ ನಾಮಫಲಕದಲ್ಲಿ ಪ್ರಕಟಿಸಲಾಗುವುದು. ರೈತರು ಬೆಳೆದಿರುವ ಹೂ ಬೆಳೆಗಳು 2019-20ನೇ ಸಾಲಿನ ಹಿಂಗಾರು, ಮುಂಗಾರು ಬೆಳೆ ಸಮೀಕ್ಷೆಯಲ್ಲಿ ದಾಖಲಾಗದೇ ಇದ್ದಲ್ಲಿ ಅಂತಹ ರೈತರು ಅರ್ಜಿಯನ್ನು ತಾಲ್ಲೂಕು ತೋಟಗಾರಿಕೆ ಕಚೇರಿಗಳಿಗೆ ಪಹಣಿ,ಆಧಾರ್ ಕಾರ್ಡ್, ರೈತರ ಬ್ಯಾಂಕ್ ಪುಸ್ತಕ ಜೆರಾಕ್ಸ್ ಪತ್ರಿಯೊಂದಿಗೆ ಹಾಗೂ ರೂ20 ಛಾಪಾ ಕಾಗದ ಮುಚ್ಚಳಿಕೆ ಸಲ್ಲಿಸಬೇಕು. ರೈತರುಗಳ ತಾಲೂಕುಗಳನ್ನು ಹೋಬಳಿ ಸಹಾಯಕ ತೋಟಗಾರಿಕೆ ಅಧಿಕಾರಿ, ಕೃಷಿ ಅಧಿಕಾರಿ ಮತ್ತು ಗ್ರಾಮ ಲೆಕ್ಕಕ್ಕಾಧಿಕಾರಿಗಳನ್ನು ಒಳಗೊಂಡ ಸಮಿತಿಯು ಪರಿಶೀಲನೆ ಮಾಡಿ ಸ್ಥಳೀಯವಾಗಿ ಪಂಚನಾಮೆ ಮಾಡುವ ಆಧಾರದ ಮೇರೆಗೆ ಪರಿಹಾರ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ 9632410677,8317483470,8892664191.ಸಂಪರ್ಕಿಸಲು ಕೋರಿದ್ದಾರೆ.