ದೊಡ್ಡಬಳ್ಳಾಪುರ : ಕರೊನಾ ಸೋಂಕಿನ ಕಾರಣ ಘೋಷಿಸಲಾದ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರಕಾರ 5 ಸಾವಿರ ರೂ. ನೆರವು ಘೋಷಣೆ ಸಂಬಂಧ ಮೆ.8 ಆಧಿಕೃತ ಆದೇಶ ನೀಡಿ ವಾರ ಕಳೆದಿದೆ.ಆದರೆ ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲವೆಂದು ಚಾಲಕರು ಸರ್ಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಲಾಕ್ ಡೌನ್ ಪರಿಣಾಮ ಸಂಕಷ್ಟದಲ್ಲಿರುವ ಆಟೋ/ಟ್ಯಾಕ್ಸಿ ಚಾಲಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೆ.8ರಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.ಇದರ ಅನ್ವಯ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ 5000 ಪರಿಹಾರ ಧನವನ್ನು ಸರ್ಕಾರ ನೀಡುತ್ತದೆ ಎನ್ನಲಾಗಿದೆ.
ಆಟೋ ಮತ್ತು ಟ್ಯಾಕ್ಸಿ ಚಾಲಕರು ಸರ್ಕಾರದ ಈ ನೆರವನ್ನು ಪಡೆಯಲು ‘ಸೇವಾ ಸಿಂಧು’ ಪೋರ್ಟಲ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸರ್ಕಾರ ಘೋಷಿಸಿ,ವಾರ ಕಳೆದರು ಅರ್ಜಿ ಸ್ವೀಕಾರ ವ್ಯವಸ್ಥೆಗಾಗಿ ಸಾಫ್ಟ್ವೇರ್ ಸಿದ್ಧವಾಗದೆ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭವಾಗದೆ ಉಳಿದಿದೆ.
ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಕೆಗೆ ಸಾಫ್ಟ್ ವೇರ್ ಸಿದ್ದಪಡಿಸದೆ,ಏಕಾಏಕಿ ಘೋಷಣೆ ಮಾಡಿದ್ದು,ಚಾಲಕರಲ್ಲಿ ಬೇಸರಕ್ಕೆ ಕಾರಣವಾದರೆ,ಸೇವಾ ಸಿಂಧು ಮುಖ್ಯಸ್ಥರು ಹಾಗೂ ನಿರ್ವಹಣೆಗಾರರಲ್ಲನ್ನ ಆತಂಕಕ್ಕೆ ದೂಡಿದೆ.
” ಸಂಕಷ್ಟದಲ್ಲಿ ಚಾಲಕರೊಂದಿಗೆ ಸರ್ಕಾರದ ಆಟ “
ಸೂಕ್ತ ವ್ಯವಸ್ಥೆ ಮಾಡದೆ,ಪರಿಹಾರಕ್ಕೆ ಅರ್ಜಿ ಸಲ್ಲಿಸುವಂತೆ ಘೋಷಿಸಿ ಸರ್ಕಾರ ಚಾಲಕರ ಜೊತೆ ಆಟವಾಡುತ್ತಿದೆ.ಪರಿಹಾರಕ್ಕಾಗಿ ಕೆಲಸ ಕಾರ್ಯ ಬದಿಗೊತ್ತಿದೆ ಪದೆ ಪದೆ ಅರ್ಜಿ ಸಲ್ಲಿಸಲು ತೆರಳುವಂತಾಗಿದೆ ಎಂದು ಚಾಲಕ ಎ.ಸಿ.ಹರೀಶ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
” ಚಾಲಕರ ಆಕ್ರೋಶ – ಸೇವಾಸಿಂಧು ಮುಖ್ಯಸ್ಥರ ಅಳಲು “
ಸರ್ಕಾರದ ಘೋಷಣೆಯಂತೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿಲ್ಲ,ಇದರಿಂದಾಗಿ ಚಾಲಕರ ಆಕ್ರೋಶಕ್ಕೆ ಒಳಗಾಗಿದ್ದೇವೆ,ಸಾಫ್ಟ್ ವೇರ್ ಸಿದ್ದತೆ ನಡೆದಿದ್ದು ಮಾಹಿತಿ ನೀಡಲಾಗುವುದೆಂದು ಹೆಸರೇಳಲು ಇಚ್ಚಿಸದ ಸೇವಾಸಿಂಧು ಮುಖ್ಯಸ್ಥರು ಹರಿತಲೇಖನಿಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.
ಅರ್ಜಿ ಸಲ್ಲಿಸಲು ನಿಯಮಗಳು
A. ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲನೆ ಮಾಡಲು ಚಾಲನಾ ಅನುಜ್ಞಾ ಪತ್ರ ಮತ್ತು ಬ್ಯಾಡ್ಜ್ ಹೊಂದಿರುವವರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
B. ಫಲಾನುಭವಿಗಳು ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಾಗಿದ್ದು, ದಿನಾಂಕ: 01-03-2020 ಕ್ಕೆ ಚಾಲ್ತಿಯಲ್ಲಿರುವ ಚಾಲನಾ ಅನುಜ್ಞಾ ಪತ್ರದ ವಿವರಗಳನ್ನು ಪೋರ್ಟಲ್ ನಲ್ಲಿ ನಮೂದಿಸಬೇಕಾಗಿರುತ್ತದೆ.
C. ಚಾಲಕರ ಆಧಾರ್ ಕಾರ್ಡ್ ವಿವರಗಳನ್ನು ಪೋರ್ಟಲ್ನಲ್ಲಿ ನಮೂದಿಸಬೇಕಾಗಿರುತ್ತದೆ.
D. ಚಾಲಕರ ಬ್ಯಾಂಕ್ ಅಕೌಂಟ್ ವಿವರ, ಸಂಬಂಧಪಟ್ಟ ಬ್ಯಾಂಕಿನ ಐಎಫ್ಎಸ್ಸಿ ಕೋಡ್, ಎಂಐಸಿಆರ್ ಕೋಡ್ಗಳ ವಿವರಗಳನ್ನು ಪೋರ್ಟಲ್ನಲ್ಲಿ ನಮೂದಿಸಬೇಕಾಗಿರುತ್ತದೆ.
E. ಚಾಲಕರು ಚಾಲನೆ ಮಾಡುವ ವಾಹನದ ನೋಂದಣಿ ಸಂಖ್ಯೆ ವಿವರಗಳನ್ನು ಪೋರ್ಟಲ್ನಲ್ಲಿ ನಮೂದಿಸಬೇಕಾಗಿರುತ್ತದೆ. ವಾಹನ್-4 ತಂತ್ರಾಂಶದಿಂದ ವಿವರಗಳನ್ನು ನೇರವಾಗಿ ಪಡೆಯುವುದು.
F. ಚಾಲನಾ ಅನುಜ್ಞಾ ಪತ್ರದ ವಿವರಗಳನ್ನು ಸಾರಿಗೆ ಇಲಾಖೆಯ ಸಾರಥಿ-4 ತಂತ್ರಾಂಶದಿಂದ ನೇರವಾಗಿ ಪಡೆದುಕೊಳ್ಳಬೇಕು.
G. ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಉದ್ಯೋಗವನ್ನು ನಡೆಸಲಾಗದ ಆದಾಯ ಕಳೆದುಕೊಂಡಿರುವ ಬಗ್ಗೆ ಸ್ವಯಂ ಘೋಷಣೆ ಮಾಡಬೇಕು.
H. ಈ ಯೋಜನೆಯನ್ನು ಜಾರಿಗೊಳಿಸಲು ಅರ್ಹ ಚಾಲಕರು ತಮ್ಮ ಅರ್ಜಿಗಳನ್ನು ‘ಸೇವಾಸಿಂಧು’ವಿನ ಮುಖಾಂತರ ಸಲ್ಲಿಸಲು ವ್ಯವಸ್ಥೆ ಮಾಡಬೇಕಾಗಿರುತ್ತದೆ. ಈ ಬಗ್ಗೆ ‘ಸೇವಾಸಿಂಧು’ ವಿನಲ್ಲಿ ಸೂಕ್ತ ವ್ಯವಸ್ಥೆ ಮಾಡುವಂತೆ ಇ-ಆಡಳಿತ ಇಲಾಖೆಯನ್ನು ಕೋರಬಹುದಾಗಿದೆ.
I. ಅರ್ಹ ಫಲಾನುಭವಿಗಳಿಗೆ ಆಧಾರ್ ಸಂಖ್ಯೆಯ ಮೂಲಕ ಡಿಬಿಟಿ ಮಾಡಬೇಕು ಅಥವಾ ಆನ್ಲೈನ್ ಮೂಲಕ ಬ್ಯಾಂಕಿಗೆ ಜಮಾ ಮಾಡಬೇಕು.
J. ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಲು ಅನುವಾಗುವಂತೆ ಅರ್ಹ/ಅನರ್ಹ ಅರ್ಜಿದಾರರ ಪಟ್ಟಿಯನ್ನು ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಬೇಕು.