ದೊಡ್ಡಬಳ್ಳಾಪುರ : ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ರೈತರಿಗೆ ಬೇಕಾದ ಪರಿಕರ, ರಸಗೊಬ್ಬರ, ಬೀಜ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಎಚ್ಚರವಹಿಸುವುದರ ಜೊತೆಗೆ ರಸಗೊಬ್ಬರ ವಿತರಕರು ರೈತರೊಂದಿಗೆ ಸ್ನೇಹದಿಂದ ವರ್ತಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ರಸಗೊಬ್ಬರ ತಯಾರಕರು ಹಾಗೂ ವಿತರಕರ ಸಭೆಯ ಅಧ್ಯಕ್ಷತೆ ಅವರು ವಹಿಸಿ ಮಾತನಾಡಿದರು.
ಈಗಾಗಲೇ ಜಿಲ್ಲೆಯಲ್ಲಿ ಅಗತ್ಯವಾದ ರಸಗೊಬ್ಬರವನ್ನು ಶೇಖರಣೆ ಮಾಡಲಾಗಿದ್ದು, ರಸಗೊಬ್ಬರ ವಿತರಕರು ಹಾಗೂ ಚಿಲ್ಲರೆ ಮಾರಾಟಗಾರರು ರೈತರಿಗೆ ರಸಗೊಬ್ಬರ ತಲುಪಿಸುವ ಕಾರ್ಯವನ್ನು ರೈತಪರವಾಗಿ ಮಾಡಬೇಕೆಂದು ತಿಳಿಸಿದ ಅವರು ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಯಾವುದೇ ಕೃತಕ ಪೂರೈಕೆ ಕೊರತೆ ಬೇಡಿಕೆ ಸೃಷ್ಟಿ ಮಾಡದೆ, ರೈತರಿಗೆ ಗೊಂದಲವನ್ನು ಉಂಟು ಮಾಡಬಾರದು. ಸಾಮಾಜಿಕ ಅಂತರ ಕಾಯ್ದುಕೊಂಡು ರಸಗೊಬ್ಬರ ವಿತರಣೆಗೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ರಸಗೊಬ್ಬರ ಬೇಡಿಕೆಯ ಪ್ರಮಾಣ ಜುಲೈ ಹಾಗೂ ಅಕ್ಟೋಬರ್ ತಿಂಗಳಲ್ಲಿ ಹೆಚ್ಚುವ ಸಾಧ್ಯತೆಗಳು ಇದ್ದು, ಬೇಡಿಕೆಗೆ ಅನುಗುಣವಾಗಿ ರೈತರಿಗೆ ರಸಗೊಬ್ಬರ ಪೂರೈಸಲು ಅಧಿಕಾರಿಗಳು ಕ್ರಮವಹಿಸಬೇಕು. ಕಾಳಸಂತೆ ಸೇರಿದಂತೆ ರಸಗೊಬ್ಬರ ವಿತರಣೆಯಲ್ಲಿ ಲೋಪದೋ? ಕಂಡುಬಂದರೆ ಕೂಡಲೇ ಸಂಬಂಧಪಟ್ಟ ರಸಗೊಬ್ಬರ ಕಂಪನಿ ಹಾಗೂ ಅಂಗಡಿಯ ಪರವಾನಗಿ ರದ್ದು ಮಾಡುವುದಲ್ಲದೆ ಕಾನೂನು ರೀತಿಯ ಕ್ರಮ ಕೈ ಗೊಳ್ಳಬೇಕು ಎಂದು ತಿಳಿಸಿದರು.
ರಸಗೊಬ್ಬರ ವಿತರಣೆಯು ಪಿಓಎಸ್ ಮೂಲಕ ನಡೆಯುತ್ತಿದ್ದು, ಎಲ್ಲಾ ರಸಗೊಬ್ಬರ ಚಿಲ್ಲರೆ ಹಾಗೂ ಸಗಟು ಮಾರಾಟಗಾರರಿಗೆ ಉಪಕರಣ ನೀಡಲಾಗಿದ್ದು, ರಸಗೊಬ್ಬರ ಖರೀದಿಗೆ ಬರುವ ರೈತರ ಆಧಾರ್ ಕಾರ್ಡ್ ಸಂಖ್ಯೆ ಪಡೆದು ಪಿಎಸ್ ಉಪಕರಣದಲ್ಲಿ ನಮೂದಿಸಿ ನಂತರ ರಸಗೊಬ್ಬರ ವಿತರಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಯಸ್ವಾಮಿ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.