ದೊಡ್ಡಬಳ್ಳಾಪುರ : ಮಡಿವಾಳ ಸಮುದಾಯಕ್ಕೆ ಸರ್ಕಾರ ನೀಡುತ್ತಿರುವ 5 ಸಾವಿರ ರೂಗಳ ನೆರವು ಪಡೆಯಲು ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡದೇ, ಅಥವಾ ಸಂಘಕ್ಕೆ ಹೊಸದಾಗಿ ಸದಸ್ಯರಾಗದೇ ಸೇವಾ ಸಿಂಧು ಮೂಲಕ ಆನ್ ಲೈನ್‌ನಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಡಿವಾಳ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಮನವಿ ಮಾಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊವಿಡ್-19 ಲಾಕ್‌ಡೌನ್ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮಡಿವಾಳ ಸಮುದಾಯದ ಶ್ರಮಿಕರಿಗೆ 5 ಸಾವಿರ ರೂ ನೆರವು ನೀಡುತ್ತಿರುವುದು ಅಭಿನಂದನೀಯವಾಗಿದೆ.ಆದರೆ ಈ ನೆರವು ಕೊಡಿಸುತ್ತೇವೆಂದು ಕೆಲವು ಮಧ್ಯವರ್ತಿಗಳು, ಸಮುದಾಯದವರಿಂದ 500 ರಿಂದ 800 ರೂಗಳ ಹಣ ಪಡೆಯುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಕೆಲವರು ಸಂಘದ ಸದಸ್ಯತ್ವ ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡಬೇಕಿಲ್ಲ ಹಾಗೂ ಸಂಘದ ಸದಸ್ಯತ್ವನ್ನು ಪಡೆಯಲು ಇದು ಸಕಾಲವಲ್ಲ. ಮಡಿವಾಳ ಸಂಘಟನೆಗಳು ಸದಸ್ಯತ್ವಕ್ಕಾಗಿ ಒತ್ತಾಯಿಸದೇ, ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ನೆರವಾಗಬೇಕಿದೆ.ರಾಜ್ಯದಲ್ಲಿ 12 ಲಕ್ಷ ಮಡಿವಾಳರಿದ್ದು,ಇದರಲ್ಲಿ 4 ಲಕ್ಷ ಮಂದಿ ಕುಲಕಸುಬು ಮಾಡುತ್ತಿದ್ದಾರೆ. ಕನಿಷ್ಟ 2.5ಲಕ್ಷ ಮಂದಿಗಾದರೂ ನೀಡುವಂತೆ ಹಾಗೂ ಅಂಗಡಿ ಪರವಾನಗಿ ಕಡ್ಡಾಯ ನಿಯಮ ಮಾಡಬಾರದು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ.ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಮನವಿ ಮಾಡಲಾಗಿದ್ದು, ಇದು ಈಡೇರುವ ಭರವಸೆಯಿದೆ. ಅಂತೆಯೇ ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ ಮೀಸಲಿಟ್ಟಿದ್ದು,ಈ ಅನುದಾನಗಳನ್ನು ತ್ವರಿತವಾಗಿ ಸಮುದಾಯದ ಅರ್ಹರಿಗೆ ನೀಡುವಂತೆ ಕೋರಲಾಗಿದ್ದು, ವಿವಿಧ ಪಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಹೆಚ್.ಆರ್.ಮುನಿಶಾಮಯ್ಯ ಮಾತನಾಡಿ, ಸರ್ಕಾರದ ನೆರವಿಗಾಗಿ ಸೂಕ್ತ ದಾಖಲೆಗಳೊಂದಿಗೆ ನಿಯಮಾನುಸಾರ ಅರ್ಜಿ ಸಲ್ಲಿಸಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಓಗಳು ಅರ್ಹರನ್ನು ಗುರುತಿಸಬೇಕಿದೆ. ತಾಲೂಕಿನಲ್ಲಿ 9 ಸಾವಿರ ಮಡಿವಾಳ ಸಮುದಾಯದವರಿದ್ದಾರೆ.250 ದಿನಸಿ ಕಿಟ್‌ಗಳನ್ನು ಮೊದಲ ಹಂತದಲ್ಲಿ ವಿತರಿಸಲಾಗುವುದು ಎಂದರು.
ಸಭೆಯಲ್ಲಿ ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ರಾಜಣ್ಣ,ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಉಪಾಧ್ಯಕ್ಷ ವೆಂಕಟಾಚಲಯ್ಯ, ಗೌರವ ಅಧ್ಯಕ್ಷ ದೊಡ್ಡರಂಗಯ್ಯ,ಖಜಾಂಚಿ ನರಸಿಂಹಮೂರ್ತಿ,ಕಾರ್ಯದರ್ಶಿ ಗಂಗಾಧರ್ ಹಾಜರಿದ್ದರು.