ಕಲಬುರಗಿ : ಕರೊನಾ ಲಾಕ್ ಡೌನ್ ಪರಿಣಾಮ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸುಮಾರು 785.71 ಕೋಟಿ ರೂ. ನಷ್ಟ ಅನುಭವಿಸಿದ್ದು, ಇದನ್ನು ಸರಿದೂಗಿಸಿ ಸಂಸ್ಥೆಯನ್ನು ಆರ್ಥಿಕವಾಗಿ ಚೇತರಿಕೆ ಕಾಣಲು ಇಂಧನ ಉಳಿತಾಯಕ್ಕೆ ಹೆಚ್ಚಿನ ಒತ್ತು ಕೊಡಬೇಕು ಮತ್ತು ಅನಗತ್ಯ ಸೋರಿಕೆಗೆ ಕಡಿವಾಣ ಹಾಕಬೇಕು ಎಂದು ರಾಜ್ಯದ ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ಇಲ್ಲಿನ ಈಶಾನ್ಯ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಥೆಯ ಪ್ರತಿ ಬಸ್ಸಿನ ಕಿ.ಮಿ. ಪ್ರಯಾಣಕ್ಕೆ 45 ರೂ. ಖರ್ಚು ಮಾಡಿದರೆ ಆದಾಯ ಬರುತ್ತಿರುವುದು ಕೇವಲ 31 ರೂ. ಇಂಧನ ಉಳಿತಾಯ ಮತ್ತು ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕದ ಹೊರತು ಸಂಸ್ಥೆ ಆರ್ಥಿಕವಾಗಿ ಸಬಲವಾಗಲು ಅಸಾಧ್ಯ. ಪ್ರತಿ ಲೀಟರ್ ಇಂಧನಕ್ಕೆ ಹೆಚ್ಚಿನ ಸರಾಸರಿ ಓಡಾಟ ನೀಡುವ ವಾಹನ ಚಾಲಕರಿಗೆ ವಿಭಾಗಕ್ಕೆ ಒಬ್ಬರಂತೆ 10 ಗ್ರಾಂ ಚಿನ್ನ ನೀಡುವಂತೆ ಈಗಾಗಲೆ ನಿರ್ದೇಶನ ನೀಡಿದ್ದು, ಅದರಂತೆ ಸಂಸ್ಥೆಯ ಎಲ್ಲಾ ವಾಹನ ಚಾಲಕರಿಗೆ ಈ ಬಗ್ಗೆ ತಿಳಿಸಬೇಕು ಮತ್ತು ಇಂಧನ ಉಳಿಸುವ ವಾಹನ ಚಾಲಕರಿಗೆ ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದರು.
ಕರೋನಾ ಭಯದಿಂದ ಇನ್ನೂ ಜನ ಬಸ್ ಸಂಚಾರ ಕೈಗೊಳ್ಳುತ್ತಿಲ್ಲ. ಹೀಗಾಗಿ ಈ ಹಿಂದೆ ರೂಟ್‍ವಾರು ಕಾರ್ಯಾಚರಣೆಯಲ್ಲಿದ್ದ ಬಸ್ ಸಂಖ್ಯೆಯ ಪ್ರಮಾಣವನ್ನು ಕಡಿಮೆ ಮಾಡಬೇಕು. ಕೊರೋನಾ ಸೋಂಕು ಕಡಿಮೆಯಾದ ನಂತರ ಜನಜೀವನ ಸಹಜ ಸ್ಥತಿಗೆ ಬರುತ್ತಿದ್ದಂತೆ ಜನದಟ್ಟಣೆ ನೋಡಿಕೊಂಡು ಬಸ್ ಕಾರ್ಯಾಚರಣೆ ಸಂಖ್ಯೆ ಹೆಚ್ಚಿಸಬೇಕು ಎಂದು ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡಿದ ಡಿ.ಸಿಎಂ. ಲಕ್ಷ್ಮಣ ಸವದಿ ಅವರು ಎ.ಸಿ. ಮತ್ತು ಸ್ಲೀಪರ್ ಬಸ್ ಸೇವೆ ಆರಂಭಿಸುವಂತೆ ನಿರ್ದೇಶನ ನೀಡಿದರು.
ಸಂಸ್ಥೆಯ ವಿಜಯಪುರ, ಕೊಪ್ಪಳ ಮತ್ತು ಹೊಸಪೇಟೆಯಲ್ಲಿ ಇಂಧನ ಉಳಿತಾಯ ಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಸಾರಿಗೆ ಸಚಿವರು ಇತರೆ ವಿಭಾಗದಲ್ಲಿ ಇದ್ಯಾಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಇಂಧನ ಉಳಿತಾಯಕ್ಕೆ ಈ ವಿಭಾಗಗಳ ಮಾದರಿಯನ್ನು ಇತರೆ ವಿಭಾಗದವರು ಅಳವಡಿಸಿಕೊಳ್ಳಬೇಕು. 45 ದಿನಗಳ ನಂತರ ಮತ್ತೆ ತಾವು ಕಲಬುರಗಿ ಪ್ರವಾಸ ಕೈಗೊಂಡು ಮತ್ತೊಮ್ಮೆ ಪ್ರಗತಿ ಪರಿಶೀಲನೆ ಮಾಡುತ್ತೇನೆ. ಅಷ್ಟರೊಳಗೆ ಇಂಧನ ಉಳಿತಾಯ ಕುರಿತಂತೆ ನಿಗಧಿತ ಗುರಿ ಸಾಧಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಸ್ ನಿಲ್ದಾಣದ ಸುತ್ತಮುತ್ತ 500 ಮೀ. ಪ್ರದೇಶದಲ್ಲಿ ಖಾಸಗಿ ವಾಹನಗಳು ಪ್ರಯಾಣಿಕರನ್ನು ಕರೆದುಕೊಂಡು ಹೋಗುವಂತಿಲ್ಲ. ಈ ಸಂಬಂಧ ಆರ್.ಟಿ.ಓ. ಪೊಲೀಸ್ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಈ ಪರಿಮಿತಿಯಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ನಿಯಂತ್ರಣ ಹಾಕಬೇಕು ಮತ್ತು ನಗರ ಪ್ರದೇಶದಲ್ಲಿ ಆಟೋಗಳಲ್ಲಿ ಹೆಚ್ಚಿನ ಜನರನ್ನು ಕೂಡಿಸಿಕೊಂಡು ಸಂಚಾರ ಮಾಡದಂತೆ ಆರ್.ಟಿ.ಓ. ಅಧಿಕಾರಿಗಳು ನಿಗಾ ವಹಿಸಬೇಕು ಎಂದರು.
ಟೋಲ್ ಫ್ರೀ ವಿನಾಯಿತಿ ಕೇಳಲಾಗಿದೆ:
ಕೊರೋನಾ ಲಾಕ್ ಡೌನ್ ಪರಿಣಾಮ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಸುಮಾರು 2200 ಕೋಟಿ ರೂ. ನಷ್ಟ ಅನುಭವಿಸಿದ್ದು, ಇದೀಗ ಹಂತ-ಹಂತವಾಗಿ ಸಾರಿಗೆ ಸೇವೆ ಆರಂಭಿಸಲಾಗುತ್ತಿದೆ. ಸಂಸ್ಥೆಯ ಆರ್ಥಿಕ ಹಿತದೃಷ್ಠಿಯಿಂದ ಟೋಲ್ ನಾಕಾ ಪಾವತಿಯಿಂದ ವಿನಾಯಿತಿ ನೀಡುವಂತ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಮುಂದಿನ ತಿಂಗಳಿನಿಂದ ಕೋರಿಯರ್ ಸೇವೆ ಆರಂಭ:
ಮುಂದಿನ ತಿಂಗಳಿನಿಂದ ಸಾರಿಗೆ ಬಸ್‍ಗಳ ಮೂಲಕ ಕೋರಿಯರ್ ಸೇವೆ ಆರಂಭಿಸಲಾಗುತ್ತಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಇದೇ ರೀತಿಯಲ್ಲಿ ಮಹಾನಗರಗಳ ಸುತ್ತಮುತ್ತ ಗ್ರಾಮಗಳಲ್ಲಿ ತರಕಾರಿ-ಹಣ್ಣು ಬೆಳೆಯುವ ರೈತರು ನಗರಗಳಿಗೆ ತರಕಾರಿ-ಹಣ್ಣುಗಳ ಸಾಗಾಟಣೆಗೆ ಬಸ್‍ಗಳಲ್ಲಿ ಅವಕಾಶ ಮಡಿಕೊಡಿವ ನಿಟ್ಟಿನಲ್ಲಿ ಚಿಂತಿಸಬೇಕು ಎಂದರು.
ಬಸ್ ನಿಲ್ದಾಣ-ಡಿಪೋಗಳ ಅಭಿವೃದ್ಧಿಗೆ ಎಸ್ಟಿಮೇಟ್ ಸಿದ್ದಪಡಿಸಿ: ಸಭೆಯಲ್ಲಿ ಭಾಗವಹಿಸಿದ ಶಾಸಕರು ತಮ್ಮ ಕ್ಷೇತ್ರದಲ್ಲಿನ ಬಸ್ ನಿಲ್ದಾಣ, ಡಿಪೋ ಅಭಿವೃದ್ಧಿಪಡಿಸಲು ಸಚಿವರನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯೆಸಿದ ಡಿ.ಸಿ.ಎಂ. ಲಕ್ಷ್ಮಣ ಸವದಿ ಅವರು ಎಲ್ಲಾ ಶಾಸಕರೊಂದಿಗೆ ಸಮಾಲೊಚಿಸಿ ಅಗತ್ಯವಿರುವ ಕಡೆ ಬಸ್ ನಿಲ್ದಾಣ ಮತು ಡಿಪೋ ಅಭಿವೃದ್ಧಿಪಡಿಸುವ ಕಾಮಗಾರಿಗಳ ಬಗ್ಗೆ ಎಸ್ಟಿಮೇಟ್ ಸಿದ್ದಪಡಿಸುವಂತೆ ಸಂಸ್ಥೆಯ ಎಂ.ಡಿ. ಜಹೀರಾ ನಸ್ಸೀಂ ಅವರಿಗೆ ಸೂಚನೆ ನೀಡಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸ್ಸೀಂ, ಸಿ.ಟಿ.ಎಂ.ಓ. ಕೊಟ್ರಪ್ಪ ಡಿ., ಸಿ.ಎಂ.ಇ. ಸಂತೋಷ ಅವರು ಸಂಸ್ಥೆಯ ಪ್ರಗತಿ ವಿವರವನ್ನು ಸಭೆಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ ಇಂಧನ ಉಳಿತಾಯ ಮಾಡಿದ ವಿವಿಧ ಜಿಲ್ಲೆಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮತ್ತು ಘಟಕಾಧಿಕಾರಿಗಳಿಗೆ ಉಪಮುಖ್ಯಮಂತ್ರಿಗಳು ಸನ್ಮಾನಿಸಿದರು.
ಸಾರಿಗೆ ಸಚಿವರು ಪ್ರಥಮ ಬಾರಿಗೆ ಇಲ್ಲಿನ ಸಂಸ್ಥೆಗೆ ಭೇಟಿ ನೀಡಿದ್ದರಿಂದ ಸಾರಿಗೆ ಸಂಸ್ಥೆಯ ನೌಕರರ ಸಂಘಟನೆಗಳ ಪದಾಧಿಕಾರಿಗಳು ಸಚಿವರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಸಭೆಯಲ್ಲಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ ತೇಲ್ಕೂರ, ಡಾ.ಅವಿನಾಶ ಜಾಧವ, ಎಂ.ಎಲ್.ಸಿ. ಬಿ.ಜಿ.ಪಾಟೀಲ, ಸಂಸ್ಥೆಯ ಸಿಟಿಓ ಶಿವಸ್ವಾಮಿ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಅಶ್ಫಕ್, ಉಗ್ರಾಣ ಮತ್ತು ಖರಿದಿ ನಿಯಂತ್ರಕ ಮಂಜುನಾಥ, ಅಂಕಿ ಸಂಖ್ಯೆ ಅಧಿಕಾರಿ ಸುನೀತಾ ಜೋಷಿ ಸೇರಿದಂತೆ ಸಂಸ್ಥೆ ವ್ಯಾಪ್ತಿಯ ಜಿಲ್ಲೆಗಳ ವಿಭಾಗೀಯ ನಿಯಂತ್ರನಾಧಿಕಾರಿಗಳು,ಆರ್.ಟಿ.ಓ. ಅಧಿಕಾರಿಗಳು ಇದ್ದರು.