ದೊಡ್ಡಬಳ್ಳಾಪುರ :ಜೂ 10ರಂದು ನಿಮ್ಹಾನ್ಸ್ ಸಂಸ್ಥೆಯ ಮಕ್ಕಳ ಮಾನಸಿಕ ತಜ್ಞರು, ಯುನಿಸೆಫ್ ಪ್ರತಿನಿಧಿ, ಅಜೀಮ್ ಪ್ರೇಮ್ ಜೀ ಫೌಂಡೇಶನ್ ಸೇರಿದಂತೆ ವಿದ್ಯಾರ್ಥಿ ಶಿಕ್ಷಣದಲ್ಲಿ ಸಂಶೋಧನಾನಿರತ ಶಿಕ್ಷಣ ತಜ್ಞರು, ಹಾಗೂ ಇನ್ನು ಕೆಲ ಪರಿಣಿತರೊಂದಿಗೆ ಚರ್ಚಿಸಿ ಹಾಗೆಯೇ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಾರ್ಗದರ್ಶಿ ಸೂತ್ರಗಳನ್ವಯ ವಿದ್ಯಾರ್ಥಿಗಳ ಹಿತರಕ್ಷಿಸುವ ಸಂಬಂಧದ ಒಂದು ಸೂಕ್ತ ನಿರ್ಣಯವೊಂದನ್ನು On line ಶಿಕ್ಷಣ ಕುರಿತಂತೆ ಕೈಗೊಳ್ಳಲಾಗುವುದು ಎಂದು ಶಿಕ್ಷಣಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಖಾಸಗಿ ಶಾಲೆಗಳಲ್ಲಿ ಆನ್ಲೈನ್ ಶಿಕ್ಷಣ ಕುರಿತು ಸಾರ್ವಜನಿಕರು ಹಾಗೂ ಪೋಷಕರಿಂದ ಆಕ್ರೋಶ ಕೇಳಿಬಂದ ಹಿನ್ನೆಲೆ ಈ ಕುರಿತು ಸಚಿವರು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಸುಮಾರು 58 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.ರಾಜ್ಯ ಪಠ್ಯ ಕ್ರಮವನ್ನು ಅನುಸರಿಸುವ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಸುಮಾರು 31 ಲಕ್ಷ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ.
ಈ ಶಾಲೆಗಳ ವಿದ್ಯಾರ್ಥಿಗಳಿಗೆ ಕೋವಿಡ್ ಸಂದರ್ಭದಲ್ಲಿ ಪರ್ಯಾಯ ಬೋಧನೆಯನ್ನು ಸರ್ಕಾರವು ಆಲೋಚಿಸುತ್ತಿದ್ದು,ದೂರದರ್ಶನದ ಚಂದನ ವಾಹಿನಿಯಲ್ಲಿ ರಜಾ ಅವಧಿಯ ಬೋಧನೆಗೆ ನುರಿತ ಶಿಕ್ಷಕರ ಮೂಲಕ ಬೋಧನಾ ತರಗತಿಗಳನ್ನು ರೂಪಿಸಿ ಬಿತ್ತರಿಸುವ ಪೂರ್ವಭಾವಿ ಕ್ರಮಗಳಿಗೆ ಇಲಾಖೆಯು ಈಗಾಗಲೇ ಚಾಲನೆ ನೀಡಿದೆ.
ಗ್ರಾಮಾಂತರ ಪ್ರದೇಶಗಳಲ್ಲಿರುವ ಸರ್ಕಾರಿ, ಖಾಸಗಿ ಅನುದಾನ ರಹಿತ ಶಾಲೆಗಳ ಮಕ್ಕಳು ರಾಜ್ಯ ಸರ್ಕಾರದ ನೀತಿಗೆ ಅಗುಣವಾಗಿ ಬೋಧನಾ ಕ್ರಮಗಳನ್ನು ಯಾವುದೇ ಸಮಸ್ಯೆಯಿಲ್ಲದೇ ಅಳವಡಿಸಿಕೊಳ್ಳುವುದು ಈ ಶಾಲೆಗಳಲ್ಲಿ ಕಲಿಯುತ್ತಿರುವ ಈ ಸುಮಾರು 90 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾದ ಕ್ರಮವಾಗಿರುತ್ತದೆ.
ನಗರ ಕೇಂದ್ರಿತವಾದ ಕೇಂದ್ರ/ ಇತರೆ ಪಠ್ಯಕ್ರಮಗಳಲ್ಲಿ (CBSE, ICSE) ಕಲಿಯುತ್ತಿರುವ ಸುಮಾರು 14 ಲಕ್ಷ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿಗಳು ಮಾತ್ರ ಆನ್ಲೈನ್ ಬೋಧನೆಯ ಪರ್ಯಾಯ ಕ್ರಮಗಳನ್ನು ಪೋಷಕರ ಮತ್ತು ವಿದ್ಯಾರ್ಥಿಗಳ ಮೇಲೆ ಹೇರಿವೆ.
ಈ ಸಮಸ್ಯೆ ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವುದಿಲ್ಲ. ಖಾಸಗಿ ಶಾಲಾ ಸಂಸ್ಥೆಗಳ ರಾಜ್ಯ ಸಂಘಟನೆಗಳು, ಶಿಕ್ಷಣ ತಜ್ಞರುಗಳೊಂದಿಗೆ ಇಂದು ನನ್ನ ನೇತೃತ್ವದಲ್ಲಿ ಸಮಾಲೋಚನೆ ನಡೆಸಲಾಗಿದೆ.ಈ ಸುದೀರ್ಘ ಸಮಾಲೋಚನೆಯಲ್ಲಿ ಎಲ್ ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಹಂತದ ತರಗತಿಗಳಲ್ಲಿ ಆನ್ ಲೈನ್ ಮೂಲಕ ಶಿಕ್ಷಣವನ್ನು ನೀಡುವುದು ಆರೋಗ್ಯಕರವೂ ಅಲ್ಲ ಮತ್ತು ಯೋಗ್ಯವೂ ಅಲ್ಲ. ಹಾಗೂ ಇನ್ನುಳಿದ ತರಗತಿಗಳಿಗೆ ಮಕ್ಕಳ ಏಕಾಗ್ರತಾ ಅವಧಿ ಹಾಗೂ ಇಂತಹ ವಿನೂತನ ಬೋಧನಾ ಉಪಕ್ರಮಗಳು ಈ ವಿದ್ಯಾರ್ಥಿ ಸಮುದಾಯದ ಆರೋಗ್ಯದ ಮೇಲೆ ಉಂಟು ಮಾಡಬಹುದಾದ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಬಹುದಾಗಿದೆ ಎಂಬ ಅಭಿಪ್ರಾಯಗಳು ಹೊರಹೊಮ್ಮಿವೆ ಎಂದಿರುವ ಅವರು ಇವುಗಳು ಅಭಿಪ್ರಾಯಗಳು_ಮಾತ್ರ. ತೀರ್ಮಾನವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.