ದೊಡ್ಡಬಳ್ಳಾಪುರ: ನಗರದ ಪ್ರವಾಸಿ ಮಂದಿರ ಮುಂಭಾಗದಲ್ಲಿ ಕೆಂಪೇಗೌಡ-ಕುವೆಂಪು ಪುತ್ಥಳಿ ನಿರ್ಮಾಣಕ್ಕೂ ಅಂಬೇಡ್ಕರ್ ವೃತ್ತಕ್ಕೂ ಯಾವುದೇ ಸಂಬಂಧ ಇಲ್ಲವೆಂದು ಎಂದು ಕೆಂಪೇಗೌಡ ಜಯಂತೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಎನ್.ಹನುಂತೇಗೌಡ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರ ಮುಂಭಾಗದಲ್ಲಿ ಕುವೆಂಪು ಮತ್ತು ನಾಡಪ್ರಭು ಕೆಂಪೇಗೌಡ ಪುತ್ಥಳಿ ನಿರ್ಮಾಣ ಮಾಡುವಲ್ಲಿ ನಗರಸಭೆ ಆಡಳಿತ ಅನುಮೋದನೆ ನೀಡಿರುವ ಹಿನ್ನೆಲೆ ಕೆಂಪೇಗೌಡ ಜಯಂತೋತ್ಸವ ಆಚರಣಾ ಸಮಿತಿ ಇಲ್ಲಿನ ವಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಬೆಂಗಳೂರನ್ನು ಕಟ್ಟಿದ ಕೆಂಪೇಗೌಡ ಯಾವುದೇ ಸಮುದಾಯಕ್ಕೆ ಸೇರದೆ ಸಾಮಾಜಿಕವಾಗಿ ಎಲ್ಲರಿಗೂ ಸೇರುತ್ತಾರೆ. ಹೀಗಾಗಿ ಎಲ್ಲಾ ಸಮುದಾಯಗಳು ಪುತ್ಥಳಿ ನಿರ್ಮಾಣಕ್ಕೆ ಸಹಕರಿಸುವ ಮೂಲಕ ಸಾಮಾಜಿಕ ಜವಾಬ್ದಾರಿಗೆ ಬದ್ದರಾಗಬೇಕು.ಕೆಂಪೇಗೌಡ ಪುತ್ಥಳಿ ನಿರ್ಮಾಣ ಕಾರ್ಯದ ಆರಂಭದಲ್ಲೆ ಸಾಮಾಜಿಕ ಜಾಲ ತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಪ್ರವಾಸಿ ಮಂದಿರದ ವೃತ್ತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಿದ್ದರು ಅಲ್ಲಿ ಕೆಂಪೇಗೌಡ ಪುತ್ಥಳಿ ನಿರ್ಮಾಣ ಮಾಡಲು ಹೊರಟಿರುವುದು ಸರಿಯಲ್ಲ ಎಂಬ ಆರೋಪಗಳಲ್ಲಿ ಹುರುಳಿಲ್ಲ. ಆ ವೃತ್ತದಲ್ಲಿ ಪುತ್ಥಳಿ ನಿರ್ಮಾಣ ಮಾಡುತ್ತಿಲ್ಲ ಆದರೆ ಪ್ರವಾಸಿ ಮಂದಿರದ ಮುಂಭಾಗ ಪುತ್ಥಳಿ ನಿರ್ಮಾಣ ಮಾಡುತಿದ್ದೆವೆ.ಅಲ್ಲಿನ ವೃತ್ತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಿರುವುದಕ್ಕೆ ನಮ್ಮ ಸಹಮತವೂ ಇದೆ. ಆದ್ದರಿಂದ ಪುತ್ಥಳಿ ನಿರ್ಮಾಣಕ್ಕೂ ಡಾ.ಬಿ.ಆರ್.ಅಂಬೇಡ್ಕರ್ ವೃತ್ತಕ್ಕೂ ಯಾವುದೇ ಸಂಬಂಧ ಇಲ್ಲ. ಹೀಗಾಗಿ ಯಾರು ಗೊಂದಲ ಮಾಡಿಕೊಳ್ಳುವುದು ಬೇಡ.
ಕಳೆದ ಎರಡು ವರ್ಷಗಳ ಹಿಂದೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಇಲ್ಲಿನ ಪ್ರವಾಸಿ ಮಂದಿರದ ಮುಂಭಾಗ ಬಲ ಭಾಗದಲ್ಲಿ ನಾಡಪ್ರಭು ಕೆಂಪೇಗೌಡ ಮತ್ತು ಎಡಭಾಗದಲ್ಲಿ ರಾಷ್ಟ್ರ ಕವಿ ಕುವೆಂಪು ಪ್ರತಿಮೆಯನ್ನು ನಗರಸಭೆ ಅನುಧಾನದಲ್ಲಿ ಸ್ಥಾಪಿಸುವುದಾಗಿ ಅನುಮೋದನೆಯಾಗಿತ್ತು.ಈ ಹಿನ್ನೆಲೆಯಲ್ಲಿ ಪುತ್ಥಳಿಗಳನ್ನು ಸ್ಥಾಪಿಸುವಲ್ಲಿ ವಕ್ಕಲಿಗ ಸಮುದಾಯವೇ ಅಲ್ಲದೆ ಜಾತ್ಯಾತೀತವಾಗಿ ಪ್ರತಿಮೆಗಳನ್ನು ಸ್ಥಾಪಿಸುವಲ್ಲಿ ತಾಲೂಕಿನ ಜನತೆ ಆರ್ಥಿಕವಾಗಿ ಸೇರಿದಂತೆ ಅಗತ್ಯವಾದ ಸಹಕಾರವನ್ನು ನೀಡಬೇಕೆಂದು ಮನವಿ ಮಾಡಿದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ನಾಡಪ್ರಭು ಕೆಂಪೇಗೌಡ ಸಾಮಾಜಿಕವಾಗಿ, ಜಾತ್ಯಾತೀತವಾಗಿ ಬೆಂಗಳೂರನ್ನು ಕಟ್ಟಿದರು. ಅಲ್ಲದೆ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲೂ ಅವರ ಕುಟುಂಬಗಳು ದಕ್ಷ ಆಡಳಿತ ನೀಡಿರುವ ಗುರುತುಗಳು ಇವೆ. ಇಂದು ಸಮೃದ್ಧ ಬೆಂಗಳೂರಿನಲ್ಲಿ ಇದ್ದೇವೆ ಎಂದರೆ ಅದು ಕೆಂಪೇಗೌಡರ ಕೊಡುಗೆ ಆಗಿದೆ. ಹೀಗಾಗಿ ಸಮಾಜಕ್ಕೆ ಜಾತ್ಯಾತೀತವಾಗಿ ಸಲ್ಲಬೇಕಾದ ಕೆಂಪೇಗೌಡ ಹಾಗು ಕನ್ನಡ ಸಾಹಿತ್ಯವನ್ನು ರಾಷ್ಟ್ರಮಟ್ಟಕ್ಕೆ ಒಯ್ದ ಕುವೆಂಪು ಅವರ ಪುತ್ಥಳಿ ನಿರ್ಮಾಣ ಸ್ವಾಗತಾರ್ಹವಾಗಿದೆ. ಈ ನಿಟ್ಟನಲ್ಲಿ ನಗರಸಭೆ ಮುಂಭಾಗ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ನೀಡರುವುದು ವೈಯಕ್ತಿಕವಾಗಿ ನನಗೆ ಸೂಕ್ತ ಸ್ಥಳ ಎನಿಸಿದೆ ಎಂದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮಿನಾರಾಯಣ್ ಮಾತನಾಡಿ, ತಾಲೂಕಿನ ವಕ್ಕಲಿಗ ಸಮುದಾಯವರು ಪ್ರತಿಯೊಬ್ಬರು ಪುತ್ಥಳಿ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಿದರೆ ಬಹು ದೊಡ್ಡ ಮೊತ್ತ ಸೇರುವುದರೊಂದಿಗೆ ಕೆಂಪೇಗೌಡ ಮತ್ತು ಕುವೆಂಪು ಪುತ್ಥಳಿ ನಿರ್ಮಾಣ ಇತಿಹಾಸ ಸೃಷ್ಠಿಸುತ್ತದೆ ಎಂದರು.
ರಾಜ್ಯ ವಕ್ಕಲಿಗ ಸಂಘದ ನಿರ್ದೆಶಕ ಬಿ.ಮುನೇಗೌಡ ಮಾತನಾಡಿ, ರಾಜ್ಯ ವಕ್ಕಲಿಗರ ಸಂಘದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ 13 ಸಾವಿರ ವಕ್ಕಲಿಗರು ನೋಂದಣಿ ಮಾಡಿಕೊಂಡಿದ್ದಾರೆ. ಇವರನ್ನು ಪುತ್ಥಳಿ ನಿರ್ಮಾಣಕ್ಕೆ ಬಳಸಿಕೊಳ್ಳುವ ಕಾರ್ಯ ಆಗಬೇಕಿದೆ. ಒಟ್ಟು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 38 ಸಾವಿರ ಸದಸ್ಯರಿದ್ದು, ಅವರನ್ನು ಬಳಸಿಕೊಳ್ಳುವ ಮೂಲಕ ಕೆಂಪೇಗೌಡ ಪುತ್ಥಳಿ ನಿರ್ಮಾಣ ನಿರಾಯಸವಾಗಿ ಮುಗಿಯುತ್ತದೆ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಸಮುದಾಯದ ವಿವಿಧ ರಾಜಕೀಯ ಮುಖಂಡರಾದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ, ಮಾಜಿ ಸದಸ್ಯ ಎ.ನರಸಿಂಹಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮಿನಾರಾಯಣ್, ದರ್ಗಾಜೋಗಿಹಳ್ಳಿ ಗ್ರಾಪಂ ಅಧ್ಯಕ್ಷ ನಾಗೇಶ್, ಬಿಜೆಪಿ ತಾಲೂಕು ಅಧ್ಯಕ್ಷ ನಾಗರಾಜು, ಜೆಡಿಎಸ್ ತಾಲೂಕು ಅಧ್ಯಕ್ಷ ಲಕ್ಷ್ಮಿಪತಯ್ಯ ಸೇರಿದಂತೆ ಸಮುದಾಯದ ಹಿರಿಯ ಮುಖಂಡರು ಯುವ ಮುಖಂಡರು ಇದ್ದರು.
**************