ಮುಖ್ಯಾಂಶಗಳು
* ಜೂ.19ಕ್ಕೆ ಎಪಿಎಂಸಿ ಅಧ್ಯಕ್ಷ,ಉಪಾಧ್ಯಕ್ಷ ಚುನಾವಣೆ
* ನಾಮಿನಿ ನಿರ್ದೇಶಕರೇ ನಿರ್ಣಾಯಕ
* ಜೆಡಿಎಸ್ – ಕಾಂಗ್ರೆಸ್ ಮೈತ್ರಿ..?
* ಗೋವಿಂದರಾಜ್ – ಲೋಕೇಶ್ ನಡುವೆ ಸ್ಪರ್ದೆ..?
* ಜೆಡಿಎಸ್ ಪಕ್ಷದ ಲೋಕೇಶ್ಗೆ ಅದೃಷ್ಟ..?
ದೊಡ್ಡಬಳ್ಳಾಪುರ: ನಿಯಂತ್ರಣಕ್ಕೆ ಬಾರದ ಕರೊನಾ ಸೋಂಕಿನ ಹಾವಳಿಯ ನಡುವೆಯೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಆಡಳಿತ ಮಂಡಳಿಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಜೂ.19ಕ್ಕೆ ಚುನಾವಣೆ ನಡೆಯಲಿದ್ದು.ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಪೈಪೋಟಿ ಆರಂಭವಾಗಿದೆ.
13 ಜನ ನಿರ್ದೇಶಕರ ಸದಸ್ಯತ್ವ ಬಲದ ದೊಡ್ಡಬಳ್ಳಾಪುರ,ನೆಲಮಂಗಲ ಹಾಗೂ ದೇವನಹಳ್ಳಿ ತಾಲ್ಲೂಕನ್ನು ಒಳಗೊಂಡಿರುವ ಎಪಿಎಂಸಿಯಲ್ಲಿ ಕಾಂಗ್ರೆಸ್ 7, ಜೆಡಿಎಸ್ 6 ಸ್ಥಾನಗಳನ್ನು ಹೊಂದಿವೆ.ಸರ್ಕಾರದಿಂದ ನಾಮ ನಿರ್ದೇಶನ ಹೊಂದುವ 3 ಸ್ಥಾನಗಳ ಪೈಕಿ 1 ಸ್ಥಾನಕ್ಕೆ ಕೆಲ ದಿನಗಳ ಹಿಂದೆಯಷ್ಟೇ ಎಂ.ಸಿದ್ದಲಿಂಗಯ್ಯ ನಾಮ ನಿರ್ದೇಶನಗೊಂಡಿದ್ದಾರೆ. ಉಳಿದ 2 ಸ್ಥಾನಗಳು ಖಾಲಿ ಉಳಿದಿವೆ. ಚುನಾವಣೆ ಒಂದು ದಿನ ಇರುವಂತೆಯು ಸರ್ಕಾರ ನಾಮ ನಿರ್ದೇಶನ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ದೊಡ್ಡಬಳ್ಳಾಪುರದಿಂದ 5ಜನ, ದೇವನಹಳ್ಳಿ ತಾಲ್ಲೂಕಿನಿಂದ 2 ಜನ ಕಾಂಗ್ರೆಸ್ ಪಕ್ಷದಿಂದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ಜೆಡಿಎಸ್ ಪಕ್ಷದಿಂದ ದೊಡ್ಡಬಳ್ಳಾಪುರ 2, ನೆಲಮಂಗಲ 3 ಹಾಗೂ ದೇವನಹಳ್ಳಿ ತಾಲ್ಲೂಕಿನಿಂದ ಒಬ್ಬ ನಿರ್ದೇಶಕರು ಆಯ್ಕೆಯಾಗಿದ್ದಾರೆ.
ಹಾಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ದೇವನಹಳ್ಳಿ ತಾಲ್ಲೂಕಿಗೆ ನೀಡಲಾಗಿದೆ.ಹೀಗಾಗಿ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ದೊಡ್ಡಬಳ್ಳಾಪುರ ತಾಲ್ಲೂಕಿಗೆ ನೀಡಬೇಕು ಎಂದು ಎರಡೂ ಪಕ್ಷದ ಮುಖಂಡರು ಹೈಕಮಾಂಡ್ ಮೇಲೆ ಒತ್ತಡ ಹೆರುತಿದ್ದಾರೆ.
ಎರಡನೇ ಅವಧಿಯ 20 ತಿಂಗಳ ಆಡಳಿತಕ್ಕಾಗಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದಿಂದ ಜಿಂಕೆಬಚ್ಚಹಳ್ಳಿ ಬಿ.ವಿ.ಲೋಕೇಶ್, ಕಾಂಗ್ರೆಸ್ ಪಕ್ಷದಿಂದ ನಾರನಹಳ್ಳಿ ಎಂ.ಗೋವಿಂದರಾಜ್, ಹೊಸಹಳ್ಳಿಯ ವಿಶ್ವನಾಥರೆಡ್ಡಿ ಹಾಗೂ ಹಾಲಿ ಅಧ್ಯಕ್ಷರಾಗಿರುವ ಕುಂದಾಣದ ಕೆ.ವಿ.ಮಂಜುನಾಥ್ ಸಹ ಆಕಾಂಕ್ಷಿಗಳಾಗಿದ್ದಾರೆ.
ನಾಮಿನಿ ನಿರ್ದೇಶಕರೇ ನಿರ್ಣಾಯಕ
ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಥಾನ ಹೆಚ್ಚಾಗಿದ್ದರು ಸಹ ಸರ್ಕಾರದಿಂದ ನಾಮ ನಿರ್ದೇಶನಗೊಳ್ಳುವ ನಿರ್ದೇಶಕರ ಮತಗಳೇ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕವಾಗಲಿವೆ.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇರುವುದರಿಂದ ಸರ್ಕಾರದಿಂದ ನಾಮ ನಿರ್ದೇಶನಗೊಳ್ಳುವವರು ಸಹಜವಾಗಿಯೇ ಬಿಜೆಪಿ ಪಕ್ಷದವರೇ ಆಗಿರುತ್ತಾರೆ. ಈಗ ಒಂದು ಸ್ಥಾನಕ್ಕೆ ನಾಮ ನಿರ್ದೇಶಕರಾಗಿರುವ ಎಂ.ಸಿದ್ದಲಿಂಗಯ್ಯ ಅವರು ಸಹ ಬಿಜೆಪಿ ಅಭ್ಯರ್ಥಿಗಳೇ ಆಗಿದ್ದು,ಉಳಿದಿಬ್ಬರು ಯಾರಾಗಲಿದ್ದಾರೆ ಎಂಬ ಕುತೂಹಲ ಮೂರು ಪಕ್ಷಗಳಲ್ಲಿದೆ.
ಜೆಡಿಎಸ್ – ಕಾಂಗ್ರೆಸ್ ಮೈತ್ರಿ..?
ಮಿತ್ರ ಪಕ್ಷ ರಚಿಸಿಕೊಂಡು ರಾಜ್ಯದಲ್ಲಿ ಸರ್ಕಾರ ನಡೆಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಉಳಿದ ೨೦ ತಿಂಗಳಲ್ಲಿ ತಲಾ ಹತ್ತು ತಿಂಗಳು ಅಧಿಕಾರ ನಡುಸುವ ಸಾಧ್ಯತೆಗಳು ಹೆಚ್ಚಾಗಿದ್ದು,ಎರಡು ಪಕ್ಷಗಳ ಒಲವು ಏನಿರಲಿದೆ ಕಾದು ನೋಡಬೇಕಿದೆ.
ಗೋವಿಂದರಾಜ್ – ಲೋಕೇಶ್ ನಡುವೆ ಸ್ಪರ್ದೆ..?
ಕಾಂಗ್ರೆಸ್ ಪಕ್ಷದಿಂದ ಗೋವಿಂದ ರಾಜ್ ಹಾಗೂ ವಿಶ್ವನಾಥ ರೆಡ್ಡಿ ಆಕಾಂಕ್ಷಿಗಳಾಗಿದ್ದರು.ಪಕ್ಷದ ಹಿರಿಯ ಮುಖಂಡ ಗೋವಿಂದರಾಜ್ ಪರವಾಗಿ ಹೈಕಮಾಂಡ್ ಒಲವನ್ನು ಹೊಂದಿದ್ದು.ಕಾಂಗ್ರೆಸ್ ಪಕ್ಷದ ಮೂಲಗಳು ಗೋವಿಂದರಾಜ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎನ್ನುತ್ತಿರುವುದರಿಂದ, ಎಂ.ಗೋವಿಂದರಾಜ್ ಹಾಗೂ ಜೆಡಿಎಸ್ ಪಕ್ಷದ ಲೋಕೇಶ್ ನಡುವೆ ಸ್ಪರ್ದೆ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ.
ಜೆಡಿಎಸ್ ಪಕ್ಷದ ಲೋಕೇಶ್ಗೆ ಅದೃಷ್ಟ..?
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇರುವುದರಿಂದ ಸರ್ಕಾರದಿಂದ ನಾಮ ನಿರ್ದೇಶನಗೊಳ್ಳುವವರು ಸಹಜವಾಗಿಯೇ ಬಿಜೆಪಿ ಪಕ್ಷದವರೇ ಆಗಿರುತ್ತಾರೆ. ನಾಮ ನಿರ್ದೇಶನಗೊಳ್ಳುವ ನಿರ್ದೇಶಕರ ಮತಗಳೇ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕವಾಗಲಿದ್ದು.ಜಾತಿ ರಾಜಕೀಯ ನಡೆದಿದ್ದೆ ಆದಲ್ಲಿ ಬಿಜೆಪಿ ಪಕ್ಷವು ಲಿಂಗಾಯಿತರಾದ ಲೋಕೇಶ್ ಆಯ್ಕೆಗೆ ಬೆಂಬಲಿಸಲಿದೆ ಎನ್ನುವ ಮಾತುಗಳು ರಾಜಕೀಯವಲಯದಲ್ಲಿ ಕೇಳಿಬರುತ್ತಿದೆ.
******** ಹರಿತಲೇಖನಿ ವೆಬ್ ನ್ಯೂಸ್ ದೊಡ್ಡಬಳ್ಳಾಪುರ***********