ದೊಡ್ಡಬಳ್ಳಾಪುರ: ನಗರದ ಪ್ರವಾಸಿ ಮಂದಿರದ ಮುಂಭಾಗ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಎಂದು ನಾಮಕರಣವಾಗಿರುವುದರಿಂದ ಇಲ್ಲಿ ನಾಡಪ್ರಭು ಕೆಂಪೇಗೌಡ – ರಾಷ್ಟ್ರಕವಿ ಕುವೆಂಪು ಪುತ್ಥಳಿ ನಿರ್ಮಾಣ ಮಾಡುವುದು ಸಮಂಜಸವಲ್ಲ.ಇದಲ್ಲದೇ ಬೇರೆಡೆ ಸೂಕ್ತ ಸ್ಥಳ ಗುರುತಿಸಿದರೆ ನಮ್ಮ ಸಹಕಾರವಿರುತ್ತದೆ ಎಂದು ವಿವಿಧ ಸಂಘಟನೆಗಳ ಹಾಗೂ ಸಮುದಾಯದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಅಹಿಂದ ಮತ್ತು ಪ್ರಗತಿಪರ ಸಂಘಟನೆಗಳು ಹಾಗು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನಾ ಹೋರಾಟ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿ ಹಾಗೂ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮಿಪತಿ, ಕಳೆದ 28 ವರ್ಷಗಳ ಹಿಂದೆಯೆ ಇಲ್ಲಿನ ತುಮಕೂರು, ಗೌರಿಬಿದನೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರಕ್ಕೆ ಸೇರುವ ಮುಖ್ಯ ವೃತ್ತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರ ನಾಮಕರಣ ಮಾಡಿರುತ್ತದೆ. ಆದರೆ 2018ರ ನಗರಸಭೆ ಸರ್ವ ಸದಸ್ಯರ ಸಭೆಯಲ್ಲಿ ಅದೇ ವೃತ್ತಕ್ಕೆ ಹೊಂದಿಕೊಂಡಿರುವ ಪ್ರವಾಸಿ ಮಂದಿರದ ಮುಂಭಾಗದಲ್ಲಿ ನಾಡಪ್ರಭು ಕೆಂಪೇಗೌಡ ಮತ್ತು ರಾಷ್ಟ್ರಕವಿ ಕುವೆಂಪು ಅವರ ಪುತ್ಥಳಿ ನಿರ್ಮಾಣಕ್ಕೆ ಸರ್ವಾನುಮತದ ಅನುಮೋದನೆ ನೀಡಿದ್ದಾರೆ. ಈ ರೀತಿ ಮಾಡುವುದಾದರೆ ಇಲ್ಲಿನ ಅಂಬೇಡ್ಕರ್ ವೃತ್ತದ ಹೆಸರೆ ಮಾಯವಾಗುತ್ತದೆ ಎಂದರು.
ಮಾದರ ಚನ್ನಯ್ಯ ಮಹಾಸಭಾದ ಕೋರ್‌ಕಮಿಟಿ ಅಧ್ಯಕ್ಷ ಮಾ.ಮುನಿರಾಜು ಮಾತನಾಡಿ ಪ್ರತಿಮೆ ವಿಚಾರದಲ್ಲಿ ಶಾಸಕರು ಒಂದು ವರ್ಗದ ಜನರ ಪರವಾಗಿ ನಿಲ್ಲುವುದು ಸಮಂಜಸವಲ್ಲ. ಎಲ್ಲಾ ವರ್ಗದವರನ್ನು ಕರೆದು ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ ಎಂದರು.
ಇಲ್ಲಿ ಯಾವುದು ಒಂದು ಸಮುದಾಯ ಜಾತ್ಯಾತೀತವಾಗಿ ಸಮಾಜಕ್ಕೆ ಬದುಕಿದವರನ್ನು ತಮ್ಮ ಜಾತಿ ಧರ್ಮಗಳ ಆಧಾರದ ಜಾತಿ ಸಾಮರಸ್ಯ ಕದಡುವುದು ಬೇಡ. ಹೀಗಾಗಿ ಈ ಕೂಡಲೆ ಪ್ರವಾಸಿ ಮಂದಿರದ ಮುಂಭಾಗ ಪುತ್ಥಳಿ ನಿರ್ಮಾಣವನ್ನು ಕೈ ಬಿಟ್ಟು ನಗರದಲ್ಲಿ ಬಹುತೇಕ ಸ್ಥಳವಕಾಶ ಇದ್ದು ಅಲ್ಲಿ ಕೆಂಪೇಗೌಡ-ಕುವೆಂಪು ಪುತ್ಥಳಿ ನಿರ್ಮಾಣ ಮಾಡಲಿ ಅದರ ಜೊತೆ ನಾವು ಸಹ ಇರುತ್ತೇವೆ ಎಂದು ಅಹಿಂದ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಅಭಿಪ್ರಾಯಪಟ್ಟರು
ಸಭೆಯಲ್ಲಿ ಕನ್ನಡಪಕ್ಷ ತಾಲೂಕು ಅಧ್ಯಕ್ಷ ಸಂಜೀವ ನಾಯಕ, ಕರವೇ(ಪ್ರವೀಣ್‌ಕುಮಾರ್ ಶೆಟ್ಟಿ ಬಣ) ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ ಹಾಗು ಹಿಂದುಳಿದ ವರ್ಗಗಳ,ದಲಿತ ಸಂಘಟನೆಗಳು ಸೇರಿದಂತೆ ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
*****************