ಬೆಂಗಳೂರು : ಜೂನ್.18ರಂದು ಪಾದಯಾತ್ರೆ ಮೂಲಕ ಮಾಸ್ಕ ದಿನವನ್ನು ಆಚರಿಸಿ ಜನಜಾಗೃತಿ ಮೂಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಆದೇಶಿಸಿದ್ದಾರೆ.
ಕೋವಿಡ್ – 19 ಸೋಂಕು ನಿಯಂತ್ರಿಸಲು ರಾಷ್ಟ್ರೀಯ ನಿರ್ದೇಶನ ಪಾಲಿಸುವುದು ಕಡ್ಡಾಯವಾಗಿದೆ.ಈ ಸೋಂಕು ನಿಯಂತ್ರಿಸಲು ಮುಖಗವುಸು(ಮಾಸ್ಕ್) ಧರಿಸುವುದು,ಸೋಪಿನಿಂದ ಕೈ ತೊಳೆಯುವುದು,ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತೀ ಮುಖ್ಯವಾದ ವೈದ್ಯಕೀಯೇತರ ಪಾಲನೆಯಾಗಿದೆ.
ಈ ಕುರಿತು ಜನ ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯ ಸರ್ಕಾರ ಜೂನ್ 18ರ ಗುರುವಾರದಂದು ಮಾಸ್ಕ್ ದಿನವನ್ನಾಗಿ ಘೋಷಿಸಲು ನಿರ್ಧರಿಸಿದೆ.
ಈ ದಿನ ಜಿಲ್ಲಾ ಮತ್ತು ತಾಲೂಕು ಆಡಳಿತವು ಚುನಾಯಿತ ಜನ ಪ್ರತಿನಿಧಿಗಳು,ಗಣ್ಯ ವ್ಯಕ್ತಿಗಳು,ವೈದ್ಯಕೀಯ ಸಿಬ್ಬಂದಿಗಳು ಭಾಗವಹಿಸಿಕೊಂಡು ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸಲು ಸೂಚಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು,50ಕ್ಕು ಹೆಚ್ಚು ಜನ ಭಾಗವಹಿಸದಿರುವುದು,ಪಾದಯಾತ್ರೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತಿತರ ಸೂಚನೆ ನೀಡಿದ್ದಾರೆ.