ದೊಡ್ಡಬಳ್ಳಾಪುರ: ಕರೊನಾ ವೈರಸ್ ನಡುವೆಯು ಎಚ್ಚರಿಕೆಯಿಂದ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಪ್ರತಿಯೊಬ್ಬರು ಸಹ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಅಗತ್ಯ ಇದೆ ಎಂದು ಸಕರ್ಲ್ ಇನ್ಸ್ಪೆಕ್ಟರ್ ರಾಘವ ಎಸ್.ಗೌಡ ಹೇಳಿದರು.
ಅವರು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಎಫ್ಕೆಎಆರ್ಡಿಯು ಆಟೋ ಸಂಘದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಕೋವಿಡ್-19 ಆಟೋ ಚಾಲಕರು ಸೇರಿದಂತೆ ಎಲ್ಲರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸೋಂಕು ಹರಡದಂತೆ ಎಚ್ಚರದಿಂದ ಕೆಲಸ ಮಾಡಬೇಕಿದೆ. ಆಟೋದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವಾಗ ಸೋಂಕು ಹರಡದಂತೆ ವಹಿಸಬೇಕಿರುವ ಎಚ್ಚರದ ಕಡೆಗೆ ನಿಗಾವಹಿಸಬೇಕು. ಮಾಸ್ಕ್ ಧರಿಸುವುದು ಪ್ರಯಾಣಿಕರಿಗಷ್ಟೇ ಅಲ್ಲದೆ ಚಾಲಕರು ಸಹ ರೂಢಿಸಿಕೊಳ್ಳಲೇಬೇಕು ಎಂದರು.
ನಗರದಲ್ಲಿನ ಆಟೋಗಳನ್ನು ಪ್ರಯಾಣಿಕರು ಹಾಗೂ ಅಪಘಾತ ಸೇರಿದಂತೆ ಇತರೆ ಸಂದರ್ಭಗಳಲ್ಲಿ ಥಟ್ಟನೆ ಗುರುತಿಸಲು ಅನುಕೂಲವಾಗುವಂತೆ ಪೊಲೀಸ್ ಠಾಣೆಯಿಂದ ಕ್ರಮವಾಗಿ ಸಂಖ್ಯೆಗಳನ್ನು ನೀಡಲಾಗುತ್ತಿದೆ. ಆಟೋಗಳಿಗೆ ಸೂಕ್ತ ದಾಖಲೆಗಳು ಇಲ್ಲದೇ ಇದ್ದ ಸಂದರ್ಭದಲ್ಲಿ ಆಟೋ ಚಾಲನೆ ಮಾಡುತ್ತಿರುವವರ ಆಧಾರ್ ಸಂಖ್ಯೆ, ಪ್ರಸ್ತುತ ವಾಸದ ಸ್ಥಳದ ಗುರುತಿನ ದಾಖಲೆಯನ್ನು ಪಡೆದು ಕ್ರಮ ಸಂಖ್ಯೆಗಳನ್ನು ನೀಡಲಾಗುತ್ತಿದೆ ಎಂದರು.
ಸಭೆಯಲ್ಲಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸೋಮಶೇಖರ್, ಎಫ್ಕೆಎಆರ್ಡಿಯು ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಎ.ವೆಂಕಟೇಶ್, ಉಪಾಧ್ಯಕ್ಷ ಚಂದ್ರಶೇಖರ್,ಗಿರೀಶ್,ದಿನೇಶ್, ಕಾರ್ಯದರ್ಶಿ ಟಿ.ಎಂ.ಇನಾಯತ್ಪಾಷ, ಸಹ ಕಾರ್ಯದರ್ಶಿ ಲಕ್ಷ್ಮೀಕಾಂತ್, ಖಜಾಂಚಿ ಮಂಜುನಾಥ್ ಇದ್ದರು.