ಬೆಂಗಳೂರು: ಕರೊನ ಸೋಂಕು ಪೀಡಿತರು ಬೆಡ್ಗಳಿಲ್ಲದೆ, ಚಿಕಿತ್ಸೆ ಇಲ್ಲದೆ ಮನೆಯಲ್ಲೇ ನರಳಿ ಸಾಯುತ್ತಿದ್ದಾರೆ. ಆರಂಭಿಕ ಹಂತದಲ್ಲೇ ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಕಳೆದ ಮೂರು ತಿಂಗಳಿಂದ ಮುಖ್ಯಮಂತ್ರಿ ಸೇರಿದಂತೆ ಸಚಿವರುಗಳು ಮಾತಿನ ಮಂಟಪ ಕಟ್ಟುವುದರಲ್ಲಿ ಕಾಲ ಕಳೆದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು,ಸರ್ಕಾರ ಕೇವಲ ಸರ್ವಪಕ್ಷಗಳ ಸಭೆ ಕರೆದರೆ ಸಾಲದು.ಆ ಸಭೆಯಲ್ಲಿ ನೀಡುವ ಸಲಹೆಗಳನ್ನು, ತೆಗೆದುಕೊಂಡ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಬೇಕು. ಕಳೆದ 3 ತಿಂಗಳಿನಿಂದ ನಾವು ನೀಡಿರುವ ಒಂದು ಸಲಹೆಯನ್ನೂ ಕಾರ್ಯರೂಪಕ್ಕೆ ತಂದಿಲ್ಲ. ಸರ್ಕಾರದ ಅವ್ಯವಸ್ಥೆಗೆ ಬಡ, ಮಧ್ಯಮ ವರ್ಗದ ಜನರು ಈಗ ಜೀವ ತೆರಬೇಕಾಗಿದೆ.
ಸರ್ಕಾರ ಇನ್ನಾದರೂ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಲಿ. ಕೊರೋನಾ ಸಮರ್ಪಕ ನಿರ್ವಹಣೆಗೆ ನಾನು ಕೊಟ್ಟ ಹತ್ತಾರು ಸಲಹೆಗಳನ್ನು ಲಘುವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದಿದ್ದಾರೆ.