ಬೆಂಗಳೂರು: ರಾಜ್ಯದ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ತೀವ್ರ ಸಂಕಷ್ಟದಲ್ಲಿರುವುದು ಸರ್ಕಾರದ ಗಮನದಲ್ಲಿದೆ. ಇವರುಗಳ ಪರಿಸ್ಥಿತಿ ನನಗೆ ವೇದನೆಯನ್ನು ಹೆಚ್ಚಿಸಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಖಾಸಗಿ ಶಾಲೆ ಶಿಕ್ಷಕರಿಗೆ ನೆರವಾಗುವ ವಿಚಾರ ಕುರಿತು ಶಿಕ್ಷಣ ಇಲಾಖೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಸಹಶಿಕ್ಷಕರ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಚರ್ಚೆ ಕುರಿತು ಮಾಹಿತಿ ನೀಡಿರುವ ಅವರು,ಸಂಕಷ್ಟದಲ್ಲಿರುವ ಈ ಎಲ್ಲಾ ಖಾಸಗಿ ಶಾಲಾ ಶಿಕ್ಷಕರೂ ನಮ್ಮ ಕುಟುಂಬದವರೇ.ಅವರಿಗೆ ಅಗತ್ಯ ನೆರವು ನೀಡುವುದು ನಮ್ಮ ಧರ್ಮ ಎಂದು ನಾನು ಮನವಿ ಮಾಡಿದೆ.
ಇಂತಹ ಸಂದರ್ಭದಲ್ಲಿ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ನಮ್ಮ ಶಿಕ್ಷಕರಿಗೆ ಒಂದೆರಡು ದಿನಗಳ ವೇತನವನ್ನು ನೀಡಲು ನಮ್ಮ ಶಿಕ್ಷಕ ಸಮುದಾಯ ಮುಂದೆ ಬರಬೇಕೆಂದು ಮನವಿ ಮಾಡಿದ್ದೇನೆ.
ಸರ್ಕಾರದ ವತಿಯಿಂದ, ಇಲಾಖೆಯ ಲಭ್ಯ ಸಂಪನ್ಮೂಲಗಳ ಮೂಲಕವೂ ಕಷ್ಟದಲ್ಲಿರುವ ನಮ್ಮ ಖಾಸಗಿ ಶಾಲಾ ಶಿಕ್ಷಕರಿಗೆ ಇತಿಮಿತಿಗಳಲ್ಲಿ ಆರ್ಥಿಕ ಸಹಕಾರ ನೀಡಲು ಸಹ ಸರ್ಕಾರ ಅವಕಾಶಗಳನ್ನು ಅವಲೋಕಿಸುತ್ತಿದೆ.
ಈ ಎರಡೂ ಸಂಘಟನೆಗಳ ಪ್ರಮುಖರು ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಇದೇ ವೇಳೆ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ತಮ್ಮ ಒಂದು ತಿಂಗಳ ವೇತನವನ್ನೇ ನೀಡುತ್ತೇನೆ ಎಂದಿದ್ದಾರೆ.ನಾನೂ ಸಹ ನನ್ನ ಪಾಲನ್ನು ನೀಡುತ್ತಿದ್ದೇನೆ.
ಆತ್ಮೀಯ ಶಿಕ್ಷಕ ಬಂಧುಗಳೇ, ಸರ್ಕಾರ ಅತ್ಯಂತ ಕಠಿಣ ಸಂದರ್ಭದಲ್ಲೂ ನಿಮ್ಮ ವೇತನ ಭತ್ಯೆಗಳಿಗೆ ತಡೆ ಮಾಡಿಲ್ಲ. ಆದುದರಿಂದ ಇಂತಹ ಸಂದರ್ಭದಲ್ಲಿ ಮಾನವೀಯ ಗುಣಗಳನ್ನು ನಾವೆಲ್ಲ ಮೆರೆಯಬೇಕಿದೆ.
ನನ್ನೆಲ್ಲ ಆತ್ಮೀಯ ಶಿಕ್ಷಕರು ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಖಾಸಗಿ ಶಿಕ್ಷಕರಿಗೆ ತಮ್ಮ ಸಹಕಾರವನ್ನು ನೀಡುವ ಮೂಲಕ ಸಮಾಜಕ್ಕೆ ಇಂದು ಅವಶ್ಯವಿರುವ ಸಕಾರಾತ್ಮಕ ಸಂದೇಶವನ್ನು ನೀಡಬೇಕಾಗಿ ನನ್ನ ಕಳಕಳಿಯ ಮನವಿ ಮಾಡುತ್ತೇನೆ ಎಂದಿದ್ದಾರೆ.
ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ಸಮಗ್ರ ಶಿಕ್ಷಣದ ನಿರ್ದೇಶಕರು ಭಾಗವಹಿಸಿದ್ದರು ಎಂದಿದ್ದಾರೆ.