ದೊಡ್ಡಬಳ್ಳಾಪುರ: ನಗರ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಸೋಮಶೇಖರ್ ಸಾರ್ವಜನಿಕರೊಂದಿಗೆ ಅನಾಗರೀಕರಾಗಿ ವರ್ತಿಸುತ್ತಿದ್ದು ಅವರ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲು ಮಂಗಳವಾರ ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ವಿವಿಧ ಸಂಘಟನೆ ಹಾಗೂ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ನಿರ್ಧರಿಸಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ಜೆಡಿಎಸ್ ಮುಖಂಡರಾದ ತ.ನ.ಪ್ರಭುದೇವ್,ಆರ್. ಕೆಂಪರಾಜು,ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಸಂಜೀವ್ ನಾಯಕ್, ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ ಮಾತನಾಡಿ, ಪೊಲೀಸರು ನಾಗರೀಕರೊಂದಿಗೆ ಸೌಜನ್ಯದಿಂದ ವರ್ತಿಸಿದಾಗ ಮಾತ್ರ ಕಾನೂನು ಸುವ್ಯವಸ್ಥೆ, ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುಲು ಸಾಧ್ಯ ಎನ್ನುವುದು ಪ್ರಜಾಪ್ರಭುತ್ವ ಆಡಳಿತದಲ್ಲಿ ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ನಗರ ಪೊಲೀಸ್ ಠಾಣೆಗೆ ಸಬ್ಇನ್ಸ್ಪೆಕ್ಟರ್ ಸೋಮಶೇಖರ್ ಅವರು ನಾಗರೀಕರಿಗೆ ತೊಂದರೆ ನೀಡುತ್ತಿದ್ದು,ಅವರ ಜೊತೆ ಅಸಭ್ಯವಾಗಿ ವರ್ತನೆ ಮಾಡುವುದಲ್ಲದೆ ನಾಗರೀಕರ ಮೇಲೆ ಹಲ್ಲೆಮಾಡುವುದು,ಬೂಟು ಕಾಲಿನಿಂದ ಒದೆಯುವುದು,ಅವ್ಯಾಚ್ಚ ಶಬ್ದಗಳಿಂದ ನಿಂದಿಸುವುದು ಮತ್ತು ಸಾರ್ವಜನಿಕವಾಗಿ ದುರ್ವರ್ತನೆಯಲ್ಲಿ ತೊಡಗಿದ್ದಾರೆ ಎಂದು ದೂರಿದರು.
ಇತ್ತೀಚೆಗೆ ಕ್ವಾರಂಟೈನ್ ವಿಷಯವಾಗಿ ತಾಲ್ಲೂಕು ಕಚೇರಿ ಮುಂದೆ ವಿವಿಧ ಸಂಘಟನೆಗಳು, ನಾಗರೀಕರು ರಾಜಕೀಯ ಪಕ್ಷಗಳ ಮುಖಂಡರೆಲ್ಲರೂ ಸೇರಿ ತಹಶೀಲ್ದಾರ್ ಅವರಿಗೆ ಮನವಿ ಕೊಡಲು ಹೋದ ಸಂದರ್ಭದಲ್ಲಿ ಸಬ್ಇನ್ಸ್ಪೆಕ್ಟರ್ ಇದ್ದಕ್ಕಿದ್ದಂತೆ ಬಂದು ಗಲಾಟೆ ಮಾಡುತ್ತಾ ಕೆಟ್ಟ ಭಾಷೆ ಬಳಸಿದ್ದಲ್ಲದೆ ತಾವು ತೊಟ್ಟಿದ್ದ ಪೊಲೀಸ್ ಸಮವಸ್ತ್ರದ ಅಂಗಿಯನ್ನೇ ಬಿಚ್ಚಿ ಎಸೆದು,ನೆಲದ ಮೇಲೆ ಧರಣಿ ಕುಳಿತು ಹುದ್ದೆಯ ಗೌರವವನ್ನು ಕಳೆದಿದ್ದಾರೆ.
ಮಗ್ಗದ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆ ಅವರುಗಳ ಮನೆಗಳ ಮುಂದೆಯೇ ಪ್ಲೇಕಾರ್ಡ್ ಹಿಡಿದು ಪ್ರತಿಭಟಿಸುತ್ತಿದ್ದವರನ್ನು ಠಾಣೆಗೆ ಕರೆದೊಯ್ದು ಗಂಟೆಗಟ್ಟಲೆ ಅಕ್ರಮವಾಗಿ ಬಂದಿಸಿಟ್ಟು ಮಾನಸಿಕ ಹಿಂಸೆ ನೀಡಿರುವುದಲ್ಲದೆ, ರೌಡಿ ಶೀಟರ್ ಕೇಸ್ ದಾಖಲಿಸುವುದಾಗಿ ಹೆದರಿಸಿದ್ದಾರೆ. ಬೆಳಕಿಗೆ ಬಾರದ ಇಂತಹ ಇನ್ನು ಹಲವು ಪ್ರಕರಣಗಳು ಇವೆ. ಕರೊನಾ ಸಂಕಷ್ಟದ ಸಂದರ್ಭದಲ್ಲಿ ನಗರದ ಪ್ರತಿಯೊಂದು ವಿಭಾಗದ ಜನತೆ ಅತ್ಯಂತ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಜನರೊಂದಿಗೆ ಸಹಾನುಬೂತಿಯಿಂದ ವರ್ತಿಸುವ ಅಗತ್ಯವಿದೆ. ಕರೊನಾ ತಡೆಗಟ್ಟಲು ನಾಗರೀಕರ ಸಹಕಾರ ಮತ್ತು ಪಾಲ್ಗೊಳ್ಳುವಿಕೆ ತುಂಬಾ ಅಗತ್ಯವಿದೆ.ಆದರೆ ಸಬ್ಇನ್ಸ್ಪೆಕ್ಟರ್ ಸೋಮಶೇಖರ್ ನಾಗರೀಕರೊಂದಿಗೆ ಪದೇ ಪದೇ ಸಂಘರ್ಷಕ್ಕಿಳಿಯುತ್ತಲೇ ಇದ್ದಾರೆ. ಇವರ ವರ್ತನೆಯಿಂದ ಪೊಲೀಸ್ ಇಲಾಖೆ ಖಂಡಿತವಾಗಿ ಮುಜುಗರಕ್ಕೆ ಈಡಾಗುತ್ತಿದೆ. ಇವರ ವಿರುದ್ದ ವಿಚಾರಣೆ ಮಾಡಿ ಕಾನೂನು ರೀತಿಯಲ್ಲಿ ಕ್ರಮಕೈಗೊಂಡು ಇವರನ್ನು ಇಲ್ಲಿಂದ ವರ್ಗಾವಣೆ ಮಾಡಿ ನಗರದ ನಾಗರೀಕರಿಗೆ ಮಾನಸಿಕ ಯಾತನೆ, ಕಿರುಕುಳದಿಂದ ಬಿಡುಗಡೆ ಮಾಡಿಬೇಕು ಹಾಗೂ ಪೊಲೀಸ್ ಇಲಾಖೆ ಗೌರವವನ್ನು ರಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಭೆಯಲ್ಲಿ ಶಿವರಾಜ್ ಕುಮಾರ್ ಕನ್ನಡ ಸೇನಾ ಸಮಿತಿ ಅಧ್ಯಕ್ಷ ಜಿ.ಆರ್.ರಮೇಶ್,ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಂಜಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಹನುಮಂತರೆಡ್ಡಿ, ಕಾರ್ಯನಿರತ ಪತ್ರಕರ್ತ ಸಂಘ ಎಂ.ದೇವರಾಜ್,ವಿದ್ಯುತ್ ಚಾಲಿತ ನೇಕಾರರ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಅರುಣ್ಕುಮಾರ್, ಅಖಿಲ ಭಾರತ ವಕೀಲರ ಸಂಘ ಎಸ್.ರುದ್ರಾರಾಧ್ಯ, ಸಿ.ಐ.ಟಿ.ಯು ತಾಲ್ಲೂಕು ಅಧ್ಯಕ್ಷ ರೇಣುಕಾರಾಧ್ಯ,ದಲಿತ ಸಂಘರ್ಷ ಸಮಿತಿ ಮುಖಂಡ ರಾಜುಸಣ್ಣಕ್ಕಿ,ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ತಾಲ್ಲೂಕು ಅಧ್ಯಕ್ಷ ಆರಾಧ್ಯ,ಕನ್ನಡ ಜಾಗೃತಿ ವೇದಿಕೆಯ ಎಚ್.ಎಸ್.ವೆಂಕಟೇಶ್, ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಬಷೀರ್,ಪು.ಮಹೇಶ್,ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಸುರೇಶ್ ರಾವ್,ಖಜಾಂಚಿ ತಿಮ್ಮರಾಜು ಇದ್ದರು.