ದೊಡ್ಡಬಳ್ಳಾಪುರ: ಕರ್ತವ್ಯ ನಿರತ ಬಂಗಾರಪೇಟೆ ತಹಶಿಲ್ದಾರ್ ಚಂದ್ರಮೌಳೇಶ್ವರ ಹತ್ಯೆ ಹಿನ್ನೆಲೆಯಲ್ಲಿ,ಸರ್ಕಾರಿ ನೌಕರರ ರಕ್ಷಣೆಗೆ ಸರ್ಕಾರ ತ್ವರಿತವಾಗಿ ಕಠಿಣ ಕಾನೂನು ರೂಪಿಸಿ ಅಗತ್ಯ ರಕ್ಷಣೆ ನೀಡಬೇಕೆಂದು ಸರ್ಕಾರಿ ನೌಕಕರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದರು.
ಬಂಗಾರಪೇಟೆ ತಹಶಿಲ್ದಾರ್ ಚಂದ್ರಮೌಳೇಶ್ವರ ಹತ್ಯೆ ಹಿನ್ನೆಲೆಯಲ್ಲಿ ನಗರದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಮಕೃಷ್ಣಯ್ಯ,
ಬಂಗಾರಪೇಟೆಯ ತಹಶಿಲ್ದಾರ್ ಚಂದ್ರಮೌಳೇಶ್ವರ ಜಮೀನು ವ್ಯಾಜ್ಯದ ಕುರಿತು ಪೊಲೀಸ್ ರಕ್ಷಣೆಯಲ್ಲಿ ಜಂಟಿ ಸರ್ವೆ ನಿರತರಾಗಿದ್ದ ವೇಳೆ ಪೊಲೀಸರ ಸಮ್ಮುಖದಲ್ಲಿಯೇ ಹತ್ಯೆಗೀಡಾಗಿರುವುದು ಸಮಸ್ತ ರಾಜ್ಯ ಸರ್ಕಾರಿ ನೌಕರರು ಹಾಗೂ ಕರ್ನಾಟಕ ರಾಜ್ಯ ನೌಕರರ ಸಂಘ ತೀವ್ರವಾಗಿ ಖಂಡಿಸುತ್ತದೆ.
ಕರ್ತವ್ಯ ನಿರ್ವಹಣೆ ವೇಳೆ ಸರ್ಕಾರಿ ಅಧಿಕಾರಿಗಳ ಮೇಲೆ ಪದೇ ಪದೇ ಇಂತಹ ಘಟನೆ ನಡೆಯುತ್ತಿರುವುದು ಆತಂಕಾರಿಯಾಗಿದ್ದು. ರಾಜ್ಯ ಸರ್ಕಾರ ಕೂಡಲೆ ಕಠಿಣ ಕಾನೂನು ರೂಪಿಸಿ ಸರ್ಕಾರಿ ನೌಕರರ ರಕ್ಷಣೆ ಮಾಡಬೇಕಿದೆ.ಅಲ್ಲದೆ ರಾಜ್ಯ ನೌಕರರು ನಿರ್ಭಿತಿಯಿಂದ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಾಣ ಮಾಡುವುದು,ಮೃತರ ಕುಟುಂಬಕ್ಕೆ ಗರಿಷ್ಠ ಮಟ್ಟದ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ರಾಜಶೇಖರ್,ಪ್ರಧಾನ ಕಾರ್ಯದರ್ಶಿ ಧನಂಜಯ,ಸಂಘಟನಾ ಕಾರ್ಯದರ್ಶಿ ವಿ.ಗೋವಿಂದಪ್ಪ,ಜಂಟಿ ಕಾರ್ಯದರ್ಶಿ ಚಂದ್ರಪ್ಪ,ರಾಜ್ಯ ಪರಿಷತ್ ಸದಸ್ಯ ಟಿ.ಕೆ.ಪ್ರಕಾಶ್,ಪತ್ರಿಕಾ ಕಾರ್ಯದರ್ಶಿ ವಿ.ಶ್ರೀನಿವಾಸ್,ನಿರ್ದೇಶಕರಾದ ನರಸಿಂಹ,ಶ್ರೀಧರ್,ಮನೋಜ್,ರಾಜಶೇಖರ್,ಗೋವಿಂದರಾಜ್,ನಿವೃತ್ತ ನೌಕರರ ಸಂಘದ ಮಹಲಿಂಗಯ್ಯ ಮತ್ತಿತರರಿದ್ದರು.