ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕೆ ಬಾರದಿದ್ದಲ್ಲಿ, ಇನ್ನೂ ಒಂದು ವಾರ ಗಮನಿಸಿ,ಸರ್ಕಾರದ ಅನುಮತಿ ಪಡೆದು ಜಿಲ್ಲಾ ಮಟ್ಟದಲ್ಲಿ ಯಾವ ರೀತಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಿಳಿಸಿದ್ದಾರೆ.
ನಗರದ ಜಿ.ಪಂ.ಭವನದಲ್ಲಿ ಶುಕ್ರವಾರ ಕೋವಿಡ್-19 ನಿಯಂತ್ರಣ ಸಂಬಂಧಿಸಿದಂತೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳು ಹಾಗೂ ಪ್ರಕೃತಿ ವಿಕೋಪ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.
ಕರೊನಾ ವೈರಸ್ ಸಂಬಂಧಿಸಿದಂತೆ ಕಳೆದ ತಿಂಗಳು ಇದ್ದ ನೆಮ್ಮದಿ ಈಗ ಇಲ್ಲ. ಆ ನಿಟ್ಟಿನಲ್ಲಿ ಇನ್ನೂ ಒಂದು ವಾರ ಗಮನಿಸಿ ಜಿಲ್ಲಾಡಳಿತ ಕ್ರಮವಹಿಸುವುದು ಅಗತ್ಯ ಎಂದು ವಿ.ಸೋಮಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ಯಾವುದೇ ಕಾರಣಕ್ಕೂ ಹೊರ ಜಿಲ್ಲೆಗೆ ಕಳುಹಿಸಬಾರದು. ಕೊಡಗು ಜಿಲ್ಲೆಯಲ್ಲಿಯೇ ವೈದ್ಯಕೀಯ ವಿಜ್ಞಾನ ಸಂಸ್ಥೆ ಇದೆ. ಸರ್ಕಾರಿ ಆಸ್ಪತ್ರೆಗಳು ಸಹ ಉತ್ತಮವಾಗಿವೆ. ಆ ನಿಟ್ಟಿನಲ್ಲಿ ಹೊರ ಜಿಲ್ಲೆಗೆ ರೋಗಿಗಳನ್ನು ಏಕೆ ಕಳುಹಿಸಬೇಕು. ಏನಾದರೂ ಕೊರತೆ ಇದ್ದಲ್ಲಿ ಸ್ಥಳೀಯ ಶಾಸಕರು ಅಥವಾ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ತೊಂದರೆ ಉಂಟಾಗಬಾರದು ಎಂದು ವಿ.ಸೋಮಣ್ಣ ಎಚ್ಚರಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಕಡ್ಡಾಯವಾಗಿ ದಾಖಲು ಮಾಡಿಕೊಳ್ಳಬೇಕು. ಇಂತಹ ಪ್ರಕರಣಗಳನ್ನು ಆಸ್ಪತ್ರೆ ಮುಖ್ಯಸ್ಥರು ಗಂಭೀರವಾಗಿ ಪರಿಗಣಿಸಬೇಕು ಎಂದು ಸಚಿವರು ಹೇಳಿದರು.
ವೈದ್ಯರ ಕೊರತೆ ಇದ್ದಲ್ಲಿ ಮಾಹಿತಿ ನೀಡಬೇಕು. ಕೋವಿಡ್ ಆಸ್ಪತ್ರೆಯಲ್ಲಿ ಅಗತ್ಯ ಊಟೋಪಚಾರ, ಬಿಸಿ ನೀರು ವ್ಯವಸ್ಥೆ ಸೇರಿದಂತೆ ಯಾವುದೇ ಕುಂದು ಕೊರತೆ ಉಂಟಾಗದಂತೆ ಗಮನಹರಿಸಬೇಕು. ದೂರುಗಳು ಕೇಳಿ ಬರಬಾರದು. ಆ ನಿಟ್ಟಿನಲ್ಲಿ ಎಲ್ಲಾ ಹಂತದ ಅಧಿಕಾರಿಗಳು ನಿಗಾವಹಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು.
ಮಳೆ ಸಂಬಂಧ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿರುವ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಕೊಡಗನ್ನು ವಿಶೇಷ ಜಿಲ್ಲೆ ಎಂದು ಪರಿಗಣಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ನುಡಿದರು. ಸಾರ್ವಜನಿಕ ಕೆಲಸಗಳು ಸುಗಮವಾಗಿ ಆಗಬೇಕು. ಯಾವುದೇ ಕಾರಣಕ್ಕೂ ಸತಾಯಿಸಬಾರದು ಎಂದರು.
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸುವಂತೆ ವಿ.ಸೋಮಣ್ಣ ಅವರು ಸಲಹೆ ಮಾಡಿದರು.
ಶಾಸಕರು ಸೇರಿದಂತೆ ಸ್ಥಳೀಯ ಪ್ರತಿನಿಧಿಗಳ ವಿಶ್ವಾಸ ಪಡೆದು ಅಧಿಕಾರಿಗಳು ಕಾರ್ಯನಿರ್ವಹಿಸಿದ್ದಲ್ಲಿ ಹಲವು ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳಿಗೆ ಮುಜುಗರ ಉಂಟಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಸಚಿವರು ಹೇಳಿದರು.ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳನ್ನು ನಿಯೋಜಿಸುವಾಗ ಅಧಿಕಾರಿಗಳನ್ನು ಹತ್ತಿರದ ಗ್ರಾ.ಪಂ.ಗಳಿಗೆ ನಿಯೋಜಿಸಬೇಕು ಎಂದು ಅವರು ಹೇಳಿದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆ, ಹೊರ ಜಿಲ್ಲೆ, ಹೊರ ರಾಜ್ಯ, ವಿದೇಶದಿಂದ ಆಗಮಿಸುವವರಿಗೆ ಚೆಕ್ ಪೋಸ್ಟ್‍ಗಳಲ್ಲಿ ಸೀಲು ಹಾಕಬೇಕು ಎಂದು ಅವರು ಸಲಹೆ ಮಾಡಿದರು.
ಕೋವಿಡ್ ಆಸ್ಪತ್ರೆಯಲ್ಲಿ ಬಿಸಿ ನೀರು ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಇದನ್ನು ಸರಿಪಡಿಸಬೇಕು ಎಂದು ಅವರು ಸೂಚಿಸಿದರು.
ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ,ಸರ್ಕಾರಿ ಆಸ್ಪತ್ರೆಗೆ ಯಾವುದೇ ರೋಗಿ ಬಂದರೂ ಸಹ ಹೊರ ಜಿಲ್ಲೆಗೆ ಕಳುಹಿಸಬಾರದು. ಚೇರಂಬಾಣೆ ಗ್ರಾಮದ 77 ವರ್ಷದವರನ್ನು ಮೈಸೂರಿಗೆ ಕಳುಹಿಸಿದ್ದಾರೆ. ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ಗಮನಹರಿಸಬೇಕು ಎಂದರು.
ಜಿಲ್ಲೆಯಲ್ಲಿ ಕೋವಿಡ್-19 ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಇದನ್ನು ನಿಯಂತ್ರಿಸಲು ಜಿ.ಪಂ. ಮತ್ತು ತಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಸ್ಥಳೀಯವಾಗಿ ತೊಡಗಿಸಿಕೊಳ್ಳುವಂತಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಬೇಕು. ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದಲ್ಲಿ ಕೊರೊನಾ ವೈರಸ್‍ನ್ನು ನಿಯಂತ್ರಿಸಬಹುದು ಎಂದು ಕೆ.ಜಿ.ಬೋಪಯ್ಯ ಅವರು ಸಲಹೆ ಮಾಡಿದರು.
ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳನ್ನು ನಿಯೋಜಿಸುವಾಗ ಹತ್ತಿರದ ಗ್ರಾ.ಪಂ.ಗೆ ನಿಯೋಜಿಸಬೇಕು.ಅದನ್ನು ಬಿಟ್ಟು ಕೆಲಸದ ಒತ್ತಡ ಇರುವ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ದೂರದ ಗ್ರಾ.ಪಂ.ಗೆ ನಿಯೋಜಿಸಿದರೆ ಹೇಗೆ ಎಂದು ಕೆ.ಜಿ.ಬೋಪಯ್ಯ ಅವರು ಪ್ರಶ್ನಿಸಿದರು.
ಸರ್ಕಾರದ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ವಿವಿಧ ಕಟ್ಟಡ ಕಾಮಗಾರಿಗೆ ಸಿಮೆಂಟ್,ಜೆಲ್ಲಿ, ಕಲ್ಲು, ಎಂ.ಸ್ಯಾಂಡ್ ಸಾಮಗ್ರಿಗಳು ಹೊರ ಜಿಲ್ಲೆಗಳಿಂದ ಬರಬೇಕಿದೆ. ಆದ್ದರಿಂದ ಲಾರಿಗಳ ಪ್ರವೇಶಕ್ಕೆ ಅವಕಾಶ ಮಾಡಬೇಕು. ಲಾರಿ ವಾಹನ ಚಾಲಕರನ್ನು ಕೋವಿಡ್ ತಪಾಸಣೆ ಮಾಡಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಮತ್ತು ಕೆ.ಜಿ.ಬೋಪಯ್ಯ ಅವರು ಹೇಳಿದರು. ಸಂಸದರಾದ ಪ್ರತಾಪ್ ಸಿಂಹ ಮಾತನಾಡಿ ಜಿಲ್ಲೆಯಲ್ಲಿ ಈಗಾಗಲೇ ರೆಸಾರ್ಟ್ ಹೋಂ ಸ್ಟೇಗಳಲ್ಲಿ ಪ್ರವಾಸಿಗರಿಗೆ ಅವಕಾಶವಿಲ್ಲ. ಇದರಿಂದ ಕೋವಿಡ್ ನಿಯಂತ್ರಣಕ್ಕೆ ಬರಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೋವಿಡ್-19 ನೆಪದಲ್ಲಾದರೂ ಸರ್ಕಾರಿ ಆಸ್ಪತ್ರೆಗಳನ್ನು ಇನ್ನಷ್ಟು ಬಲಪಡಿಸಲು ಅಗತ್ಯ ಕ್ರಮಕೈಗೊಳ್ಳಬೇಕಿದೆ. ಪ್ರಯೋಗಾಲಯ, ರಕ್ತಪರೀಕ್ಷೆ ಸೇರಿದಂತೆ ಇನ್ನಿತರ ಮೂಲ ಸೌಲಭ್ಯ ಕಲ್ಪಿಸಲು ಮುಂದಾಗಬೇಕಿದೆ. ಕೋವಿಡ್ ಪರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಪ್ರತಾಪ್ ಸಿಂಹ ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಮಾತನಾಡಿ 2018 ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಲವು ಕುಟುಂಬಗಳು ಮನೆ ಕಳೆದುಕೊಂಡವು, ಇವರಿಗೆ ಮನೆ ಹಸ್ತಾಂತರ ಮಾಡಲಾಗಿದೆ. ಬಾಕಿ ಇರುವವರಿಗೂ ಸಹ ಮನೆ ಹಸ್ತಾಂತರ ಮಾಡಬೇಕು. ಇನ್ನೂ ಉಳಿದಿರುವ ಅರ್ಹ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಮಾತನಾಡಿ ಕೋವಿಡ್ ಪ್ರಯೋಗಾಲಯದಲ್ಲಿ ಮೂಗು ಮತ್ತು ಗಂಟಲು ದ್ರವ ಮಾದರಿಯ ಪರೀಕ್ಷೆಯನ್ನು ಪ್ರತಿ ನಿತ್ಯ ಹೆಚ್ಚಳ ಮಾಡಬೇಕು. ಪರೀಕ್ಷಾ ವರದಿಯು 24 ಗಂಟೆಯೊಳಗೆ ದೊರೆಯುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ 131 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, 18 ಮಂದಿ ಬಿಡುಗಡೆಯಾಗಿದ್ದಾರೆ. 103 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 47 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 24 ಮಂದಿ ಕೋವಿಡ್ ಕೇರ್ ಸೆಂಟರ್, 32 ಮಂದಿ ಹೋಂ ಐಸೋಲೇಷನ್‍ನಲ್ಲಿ ದಾಖಲಾಗಿದ್ದಾರೆ. 10,582 ಮಂದಿಯ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 9,005 ಮಂದಿ ಮಾದರಿ ಪರೀಕ್ಷೆ ನೆಗೆಟಿವ್ ಬಂದಿದೆ. 1,455 ಮಂದಿಯ ಗಂಟಲು ದ್ರವ ಪರೀಕ್ಷೆ ನಿರೀಕ್ಷೆಯಲ್ಲಿದೆ ಎಂದರು.
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಗಾಗಿ ಜಿಲ್ಲಾಡಳಿತ ಹಲವು ಕ್ರಮಕೈಗೊಂಡಿದೆ. ಈಗಾಗಲೇ ಪ್ರತಿ ಗ್ರಾ.ಪಂಗಳಿಗೆ 50 ಸಾವಿರ ರೂ.,ನಗರಸಭೆಗೆ 2 ಲಕ್ಷ ಮತ್ತು ಪಟ್ಟಣ ಪಂಚಾಯಿತಿಗಳಿಗೆ ತಲಾ 1 ಲಕ್ಷ ರೂವನ್ನು ಬಿಡುಗಡೆ ಮಾಡಲಾಗಿದೆ ಎಂದರು. ಈಗಾಗಲೇ ಎನ್‍ಡಿಆರ್‍ಎಫ್ ತಂಡವು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್,ಉಪಾಧ್ಯಕ್ಷ ಲೋಕೇಶ್ವರಿ ಗೋಪಾಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ,ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ,ಉಪ ವಿಭಾಗಾಧಿಕಾರಿ ಟಿ.ಜವರೇಗೌಡ,ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.