ದೊಡ್ಡಬಳ್ಳಾಪುರ: ಕರೊನಾ ವೈರಸ್ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಜಾರಿಗೆ ತಂದಿರುವ ಒಂದು ವಾರಗಳ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲನೆಯಾಗುವುಂತೆ ನೋಡಿಕೊಳ್ಳಲಾಗುವುದು.ಇದಕ್ಕೆ ಸಾರ್ವಜನಿಕರ ಸಹಕಾರವು ಮುಖ್ಯ ಎಂದು ತಹಶೀಲ್ದಾರ್ ಟಿ.ಎಸ್.ಶಿವರಾಜ್ ಹೇಳಿದರು.
ಮಂಗಳವಾರ ಸಂಜೆ ನಗರದ ಮುಖ್ಯ ರಸ್ತೆಯಲ್ಲಿ ಪೊಲೀಸರೊಂದಿಗೆ ಪಥಸಂಚಲನ ನಡೆಸಿ ವಾಣಿಜ್ಯ ಮಳಿಗೆಗಳು ಸೇರಿದಂತೆ ಸಾರ್ವಜನಿಕರಲ್ಲಿ ಲಾಕ್‌ಡೌನ್ ನಿಯಮ ಪಾಲಿಸಲು ಜಾಗೃತಿ ಮೂಡಿಸಿದರು.
ಲಾಕ್ ಡೌನ್ ನಿಯಮಗಳ ಕುರಿತು ಡಿವೈಎಸ್ಪಿ ಟಿ.ರಂಗಪ್ಪ ಮಾಹಿತಿ ನೀಡಿ, ರಾಜ್ಯ ಸರ್ಕಾರ ಈಗಾಗಲೇ ಲಾಕ್‌ಡೌನ್ ನಿಯಮಾವಳಿಗಳ ಕುರಿತು ಪತ್ರಿಗಳ ಮೂಲಕ ಮಾಹಿತಿ ನೀಡಿದೆ. ಹಣ್ಣು, ತರಕಾರಿ, ಹಾಲು, ಪತ್ರಿಕೆಗಳು ಸೇತಿದಂತೆ ದಿನ ನಿತ್ಯದ ಅಗತ್ಯದ ವಸ್ತುಗಳ ಸಾಗಾಣಿಕೆ, ಮಾರಾಟಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ. ಹಾಗೆಯೇ ಔಷಧಿ ಅಂಗಡಿ, ಖಾಸಗಿ ಆಸ್ಪತ್ರೆಗಳ ಕೆಲಸ ನಿರ್ವಹಿಸಲಿವೆ. ಸಾರ್ವಜನಿಕರು ಹಣ್ಣು, ತರಕಾರಿ, ದಿನ ವಸ್ತುಗಳ ಖರೀದಿ ನೆಪದಲ್ಲಿ ದೂರದ ಅಂಗಡಿಗಳಿಗೆ ಹೋಗದೆ ಸಾಧ್ಯವಿದ್ದಷ್ಟು ಸಮೀಪದ ಅಂಗಡಿಗಳಲ್ಲೇ ಖರೀದಿ ನಡೆಸುವ ಮೂಲಕ ಒಂದು ವಾರಗಳ ಕಾಲ ಲಾಲ್ ಡೌನ್ ಗೆ ಸಹಕಾರ ನೀಡಬೇಕು. ಅನಗತ್ಯ ತಿರುಗಾಟಕ್ಕೆ ಕಡಿವಾಣ ಹಾಕಲು ಈ ಬಾರಿಯ ಲಾಕ್ ಡೌನ್ ಸಂದರ್ಭದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ರಾಘವ ಎಸ್.ಗೌಡ, ನಗರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಸೋಮಶೇಖರ್, ಗ್ರಾಮಾಂತರ ಠಾಣೆ ಸಬ್ ಇನ್ಸ್ಪೆಕ್ಟರ್ ಗಜೇಂದ್ರ ಇದ್ದರು.