ಹರಿತಲೇಖನಿ ದೊಡ್ಡಬಳ್ಳಾಪುರ: ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಕರೊನಾ ಸೋಂಕಿನ ಮಾಹಿತಿ ನೀಡುವಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಮುಚ್ಚಿಟ್ಟು, ಗೊಂದಲ ಮೂಡಿಸುತ್ತಿದೆ ಎಂದು ತಾಲೂಕಿನ ಗಣ್ಯರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 40 ಕರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದರೆ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಮಾಡಿರುವ ವರದಿಯಲ್ಲಿ ಕೇವಲ ಮೂರು ಪ್ರಕರಣಗಳೆಂದು ನಮೂದಾಗಿರುವುದಕ್ಕೆ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು,ಸರಕಾರಕ್ಕೆ ಮಾಹಿತಿ ನೀಡುವಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆಂದು ಕಿಡಿಕಾರಿದ್ದಾರೆ.
ಡಿಹೆಚ್‌ಒ ವಿರುದ್ದ ಜಿಲ್ಲಾಧಿಕಾರಿಗಳಿಗೆ ಹಾಗೂ ಉಸ್ತುವಾರಿ ಸಚಿವರಿಗೆ ದೂರು: ಕನ್ಯಾಕುಮಾರಿ ಶ್ರೀನಿವಾಸ್
ಈ ಕುರಿತು ಹರಿತಲೇಖನಿಯೊಂದಿಗೆ ಮಾತನಾಡಿರುವ ಕನ್ಯಾಕುಮಾರಿ ಶ್ರೀನಿವಾಸ್,ಕರೊನಾ ಸೋಂಕಿನ ಕುರಿತು ರಾಜ್ಯ ಸರ್ಕಾರಕ್ಕೆ ಸಮರ್ಪಕ ವರದಿ ನೀಡುವಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಬೇಜವಬ್ದಾರಿ ತೋರುತ್ತಿದ್ದಾರೆ.ಸೂಕ್ತ ವರದಿಯನ್ನು ಸರ್ಕಾರಕ್ಕೆ ನೀಡದಿದ್ದರೆ ತಾಲೂಕಿನಲ್ಲಿ ಹೆಚ್ಚುತ್ತಿರುವ ಕರೊನಾ ನಿಯಂತ್ರಣಕ್ಕೆ ಸರಕಾರದ ಗಮನ ಸೆಳೆಯುವುದು ಅಸಾಧ್ಯ.ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ಉಸ್ತುವಾರಿ ಸಚಿವರಿಗೆ ದೂರು ನೀಡಲಾಗುವುದೆಂದರು.
ವಾಸ್ತವ ವರದಿ ಸರ್ಕಾರಕ್ಕೆ ತಲುಪಿಸಿ: ಡಿ.ಸಿ.ಶಶಿಧರ್.
ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್ ಮಾತನಾಡಿ,ಕರೊನಾ ಸೋಂಕು ತಾಲೂಕಿನಲ್ಲಿ ತೀವ್ರ ರೂಪ ಪಡೆಯುತ್ತಿದೆ.ಒಂದೆ ದಿನ ನಲವತ್ತು ಪ್ರಕರಣಗಳು ದೃಢಪಟ್ಟಿರುವುದರಿಂದ ಸಮಸ್ಯೆ ಮತ್ತಷ್ಟು ಆತಂಕವನ್ನು ತಂದೊಡ್ಡಿದೆ,ಆದರೆ ಸರಕಾರಕ್ಕೆ ಸಮರ್ಪಕ ಮಾಹಿತಿ ನೀಡಬೇಕಾದ ಜಿಲ್ಲಾ ಅರೋಗ್ಯ ಇಲಾಖೆ.ತಾಲೂಕು ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದರು ತಲುಪಿಸದಿರುವುದು ಅನುಮಾನವನ್ನು ಉಂಟುಮಾಡಿದೆ.ಶಾಸಕ ಟಿ.ವೆಂಕಟರಮಣಯ್ಯರ ಕಾಳಜಿಯಿಂದ ತಾಲೂಕಿನ ಪ್ರತ್ಯೇಕ ಬುಲೆಟಿನ್ ನೀಡಲು ಸೂಚನೆ ನೀಡಿದ್ದರಿಂದ ವಾಸ್ತವ ಮಾಹಿತಿ ಜನತೆಗೆ ದೊರಕುತ್ತಿದೆ.ಆದರೆ,ಜಿಲ್ಲಾ ಆರೋಗ್ಯಾಧಿಕಾರಿಗಳು ಕರೊನಾ ನಿಯಂತ್ರಣಕ್ಕೆ ಸರಕಾರದಿಂದ ದೊರಕುವ ಸೌಲಭ್ಯ,ಸಲಹೆ ಪಡೆಯಲು ತಾಲೂಕಿನಲ್ಲಿ ಕರೊನಾ ಪ್ರಕರಣಗಳ ವಾಸ್ತವ ವರದಿಯನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸಮರ್ಪಕ ಮಾಹಿತಿ ಸರ್ಕಾರಕ್ಕೆ ತಲುಪದಿರುವ ಕಾರಣವೇನು: ತ.ನಾ.ಪ್ರಭುದೇವ್
ಕರೊನಾ ಸೋಂಕಿನ ವರದಿ ಸರ್ಕಾರಕ್ಕೆ ತಲುಪಿಸುವಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಎಡವಲು ಕಾರಣವೇ..? ವಾಸ್ತವ ಮಾಹಿತಿ ಸರಕಾರಕ್ಕೆ ತಲುಪದೇ ಕಡಿವಾಣ ಎಲ್ಲಿ ಆಗುತ್ತಿದೆ ಎಂಬುದನ್ನು ಜಿಲ್ಲಾಧಿಕಾರಿಗಳು ಕೂಡಲೆ ಗಮನಹರಿಸಬೇಕಿದೆ.ಜನತೆ ಕರೊನಾ ಸೋಂಕಿನ ಆತಂಕದಿಂದ ಬಸವಳಿಯುತ್ತಿದ್ದಾರೆ,ಆದರೆ ಸರ್ಕಾರಕ್ಕೆ ಮಾಹಿತಿ ನೀಡುವಲ್ಲಿ ಮರೆಮಾಚುತ್ತಿರುವುದೇಕೆ ಎಂದು ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ ಪ್ರಶ್ನಿಸಿದ್ದಾರೆ.
ಸರ್ಕಾರಕ್ಕೆ ಸುಳ್ಳುವರದಿ ಖಂಡನೀಯ: ಕಣಿವೇಪುರ ಸುನೀಲ್‌ಕುಮಾರ್
ಜಿಲ್ಲಾಡಳಿತ ಸರ್ಕಾರಕ್ಕೆ ಸುಳ್ಳುವರ್ದಿ ನೀಡುತ್ತಿದೆ ಎಂಬ ಆತಂಕ ಜನತೆಯನ್ನು ಕಾಡುತ್ತಿದೆ.ಸೂಕ್ತ ವರದಿ ನೀಡಿ ಕಾರೊನಾ ನಿಯಂತ್ರಣಕ್ಕೆ ಸರ್ಕಾರದ ನೆರವು ಪಡೆಯುವುದನ್ನು ಬಿಟ್ಟು ಈ ರೀತಿ ಮಾಹಿತಿ ಮುಚ್ಚಿಟ್ಟು ಕರೊನಾ ಪ್ರಕರಣದ ವರದಿ ದಿಕ್ಕುತಪ್ಪಿಸುತ್ತಿದೆ ಎಂದು ತಾಪಂ ಸದಸ್ಯ ಕಣಿವೇಪುರ ಸುನೀಲ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಗಂಭೀರ ಪ್ರಕರಣದಲ್ಲಿ ನಿರ್ಲಕ್ಷ್ಯ ಸಲ್ಲದು: ರಾಜಘಟ್ಟರವಿ
ಗಂಭೀರವಾದ ಪ್ರಕರಣಗಳನ್ನು ಸಮರ್ಪಕ ಕಾರ್ಯನಿರ್ವಹಿಸಬೇಕಾದ ಜಿಲ್ಲಾ ಆರೋಗ್ಯ ಇಲಾಖೆಯ ಬೇಜವಬ್ದಾರಿ ನಡೆ ಖಂಡನೀಯ.ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದರೆ ಜನರ ಜೀವದ ಜೊತೆ ಆಟವಾಡುವ ಬದಲು ಮನೆಯಲ್ಲಿರಲಿ,ಈ ಕೂಡಲೆ ವಾಸ್ತವ ವರದಿಯನ್ನು ಸರ್ಕಾರಕ್ಕೆ ತಲುಪಿಸಿ ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ ಎಚ್ಚರಿಕೆ ನೀಡಿದ್ದಾರೆ.