ದೊಡ್ಡಬಳ್ಳಾಪುರ: ತಾಲ್ಲೂಕಿನ ಪಂಚಗಿರಿ ಶ್ರೇಣಿಗಳಲ್ಲಿ ಒಂದಾಗಿರುವ ಚನ್ನರಾಯಸ್ವಾಮಿ (ಚನ್ನಗಿರಿ) ಬೆಟ್ಟದಲ್ಲಿ ಕಿರು ಜಲಪಾತಗಳು ಮೈದುಂಬಿ ಧುಮ್ಮಿಕ್ಕಿ ಹರಿಯುತ್ತಿದ್ದು ನೋಡಿಗರಿಗೆ ಹಬ್ಬವನ್ನು ಉಂಟು ಮಾಡಿವೆ.
ಒಂದು ವಾರದಿಂದ ಪಂಚಗಿರಿ ಶ್ರೇಣಿಯ ಬೆಟ್ಟಗಳಾದ ಚನ್ನಗಿರಿ,ನಂದಿಬೆಟ್ಟ,ದಿಬ್ಬಗಿರಿ, ವಿಷ್ಟುಗಿರಿ, ಸ್ಕಂದಗಿರಿಯಲ್ಲಿ ಒಂದು ವಾರದಿಂದ ಬೀಳುತ್ತಿರುವ ಮಳೆಯಿಂದಾಗಿ ಬೆಟ್ಟದ ತಪ್ಪಲಿನ ಚಿಕ್ಕರಾಯಪ್ಪನಹಳ್ಳಿ ಕೆರೆ ತುಂಬಿದ್ದು ಕೋಡಿ ಬಿದ್ದಿದೆ. ಚನ್ನಗಿರಿಯಲ್ಲಿ ಮಾತ್ರ ಕಿರು ಜಲಪಾತಗಳು ಹರಿಯುತ್ತವೆ. ಇಲ್ಲಿನ ಏಳು ಎಮ್ಮೆ ದೊಣೆಯಲ್ಲಿ ಧುಮ್ಮಿಕ್ಕಿವ ಜಲಪಾತವು ಜೋಗ ಜಲಪಾತದ ಮಾದರಿಯಲ್ಲೇ ಸುಮಾರು 300 ಅಡಿಗಿಂತಲೂ ಎತ್ತರದಿಂದ ಹಾಲಿನ ನೊರೆಯಂತೆ ಬೆಟ್ಟದಲ್ಲಿನ ಕಲ್ಲಿನ ಬಂಡೆ ಮೇಲಿಂದ ಕೆಳಗೆ ಧುಮುಕುತ್ತದೆ.
ನಂದಿಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿಯು ಸಾಲು ಸಾಲು ಕೆರೆಗಳಾದ ಚನ್ನಾಪುರದ ಕೂಸಮ್ಮನ ಕೆರೆ ಮೆಳೆಕೋಟೆ, ಕೊನಘಟ್ಟ, ಶಿವಪುರ, ನಾಗರಕೆರೆ, ದೊಡ್ಡತುಮಕೂರು, ಬೆಂಗಳೂರು ಉತ್ತರ ತಾಲ್ಲೂಕಿನ ಹೆಸರಘಟ್ಟ ಕೆರೆ, ಮಾಕಳಿ,ಸೊಂಡೆಕೊಪ್ಪ, ಮಾಗಡಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಜಲಾಶಯ, ಮಂಚನಬೆಲೆ ಜಲಾಶಯದ ಮೂಲಕ ರಾಮನಗರ ಜಿಲ್ಲೆಯ ಸಂಗಮದಲ್ಲಿ ಅರ್ಕಾವತಿಯು ಕಾವೇರಿ ನದಿಯಲ್ಲಿ ಸಂಗಮವಾಗುತ್ತದೆ.
ನಿರ್ಬಂಧ: ತಾಲ್ಲೂಕಿನಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚನ್ನಗಿರಿ ಬೆಟ್ಟದಲ್ಲಿನ ಜಲಪಾತಗಳ ವೀಕ್ಷಣೆಗೆ ಹೊರಗಿನಿಂದ ಬರುವ ಸಾರ್ವಜನಿಕರಿಗೆ ಬೆಟ್ಟದ ತಪ್ಪಲಿನ ಸ್ಥಳೀಯ ಗ್ರಾಮಗಳ ಜನರು ಈ ಬಾರಿ ನಿರ್ಬಂಧ ವಿಧಿಸಿದ್ದಾರೆ. ಬೆಟ್ಟದ ಕಡೆಗೆ ಹೋಗುವ ರಸ್ತೆಗಳನ್ನು ಬಂದ್ ಮಾಡಿದ್ದಾರೆ.