ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ವಾಡ್ಪ್ಯಾಕ್ ಕಂಪನಿ ಕಡಿಮೆ ವೆಚ್ಚದಲ್ಲಿ ಸಿದ್ದಗೊಳಿಸಿರುವ ಮಂಚ ಹಾಗೂ ಹಾಸಿಗೆಗಳ ಖರೀದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕ ಪ್ರಿಯಾಂಕ ಖರ್ಗೆ, ಸಲಿಂ ಅಹಮ್ಮದ್ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಗುಲ್ಬರ್ಗ ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳಿಗೆ ಅಗತ್ಯ ಇರುವ ಮಂಚಗಳ ಕೊರತೆ ಉಂಟಾಗಿದೆ. ಹೀಗಾಗಿ ಪ್ರಿಯಾಂಕ ಖರ್ಗೆ ಅವರು 650 ಮಂಚ ಹಾಗೂ ಹಾಸಿಗೆ, ದಿಂಬುಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಕೊಡುಗೆಯಾಗಿ ನೀಡುತ್ತಿದ್ದಾರೆ. ಒಂದು ಮಂಚ ಖರೀದಿಗೆ ₹850 ವೆಚ್ಚವಾಗುತ್ತಿದೆ. ಇದರೊಂದಿಗೆ ಹಾಸಿಗೆ, ದಿಂಬಿಗೆ ಪ್ರತ್ಯೇಕ ಸೇರಿ ಒಟ್ಟು ₹1,200 ವೆಚ್ಚವಾಗುತ್ತಿದೆ. ಈ ಮಂಚಗಳು ಪರಿಸರ ಸ್ನೇಹಿಯಾಗಿದ್ದು ಮರಬಳಕೆಗು ಅವಕಾಶ ಇದೆ ಎಂದರು.
ಕರೊನಾ ಸೋಂಕಿತರ ಚಿಕಿತ್ಸೆಗಾಗಿ ಖರ್ಚು ಮಾಡಲಾಗಿರುವ ಹಣದ ಬಗ್ಗೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಕೇಳಿರುವ ಪ್ರಶ್ನೆಗೆ ಬಿಜೆಪಿ ಉತ್ತರ ನೀಡಲೇಬೇಕಿದೆ. ತುರ್ತಾಗಿ ಒಂದು ಮಂಚ ನಿರ್ಮಿಸಲು ₹850 ಖರ್ಚಾಗಿರುವ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ನಮ್ಮಲ್ಲಿ ಲಭ್ಯ ಇರುವ ತಂತ್ರಜ್ಞಾನವನ್ನು ಬಳಸಿಕೊಳ್ಳದೆ ದಿನಕ್ಕೆ ₹850 ಬಾಡಿಗೆ ನೀಡಿ ಖಾಸಗಿ ವ್ಯಕ್ತಿಗಳಿಂದ ಸರ್ಕಾರ ಮಂಚ ಪಡೆದಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಕೇಳಿರುವ ಪ್ರಶ್ನೆಯಲ್ಲಿ ಸತ್ಯಾಂಶ ಇದ್ದು ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಲೆಕ್ಕ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ, ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ ಕಮಾರ್, ಎಪಿಎಂಸಿ ಅಧ್ಯಕ್ಷ ವಿಶ್ವನಾಥರೆಡ್ಡಿ, ಕೆಪಿಸಿಸಿ ಸದಸ್ಯ ಲಕ್ಷ್ಮೀಪತಿ, ಕಾಂಗ್ರೆಸ್ ಬ್ಲಾಕ್ ಗ್ರಾಮಾಂತರ ಅಧ್ಯಕ್ಷ ಎಂ.ಬೈರೇಗೌಡ, ಯುವ ಮುಖಂ ಸಂದೇಶ್, ವಾಡ್ಪ್ಯಾಕ್ ಕಂಪನಿಯ ವ್ಯವಸ್ಥಾಪಕ ಸಂದೀಪ್ ವಾಡಿವ್ ಇದ್ದರು.
650 ಮಂಚ ಹಾಗೂ ಹಾಸಿಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೊತ್ತು ಹೊರಟ ಲಾರಿಗೆ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.