ದೊಡ್ಡಬಳ್ಳಾಪುರ: ಜೀವ ಇದ್ದರೆ ಜೀವನ ಎಂಬಂತೆ ತಾಲೂಕಿನಲ್ಲಿ ಕೊವಿಡ್-19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನತೆ ಹಿಂದೆಂದಿಗಿಂತಲೂ ಹೆಚ್ಚಿನ ಎಚ್ಚರಿಕೆ ಹಾಗೂ ಮುಂಜಾಗ್ರತೆ ವಹಿಸಬೇಕಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಮನವಿ ಮಾಡಿದ್ದಾರೆ.
ತಾಲೂಕಿನಲ್ಲಿ ಒಂದೇ ದಿನ 97 ಮಂದಿಯಲ್ಲಿ ಕರೊನಾ ಪ್ರಕರಣ ದೃಢ ಪಟ್ಟಿರುವ ಹಿನ್ನಲೆ ಹರಿತಲೇಖನಿಯೊಂದಿಗೆ ಮಾತನಾಡಿದ ಅವರು,ಕೊವಿಡ್-19 ಚಿಕಿತ್ಸೆಗಾಗಿ,ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ತಾಲೂಕಿನ ವಿವಿಧ ವಸತಿ ನಿಲಯಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನ ಬಚ್ಚಹಳ್ಳಿಯ ವಸತಿ ನಿಲಯಕ್ಕೆ 50 ಪರಿಸರ ಸ್ನೇಹಿ ಮಂಚಗಳನ್ನು ಖರೀದಿಸಿ ಒದಗಿಸಲಾಗಿದೆ. ಆದರೆ ಹೆಚ್ಚಾಗುತ್ತಿರುವ ಪ್ರಕರಣಗಳಿಂದ ಇವು ಸಾಕಾಗುವುದಿಲ್ಲ.
ನಗರದ ಹೊರವಲಯದ ಬೆಸೆಂಟ್ ಪಾರ್ಕ್‌ನಲ್ಲಿ ಕೊವಿಡ್-19 ಚಿಕಿತ್ಸೆಗಾಗಿ ವಾರ್ಡ್‌ಗಳ ವ್ಯವಸ್ಥೆ ಮಾಡಲು ಸಿದ್ದತೆ ನಡೆಸಿತ್ತಾದರೂ ಕೆಲವು ತಾಂತ್ರಿಕ ತೊಂದರೆಗಳಿವೆ. ನಿರೀಕ್ಷೆಗೂ ಮೀರಿ ಪ್ರಕರಣಗಳು ಹೆಚ್ಚಾಗುತ್ತಿದ್ದರೆ, ವ್ಯವಸ್ಥೆಗಳನ್ನು ಕೈಗೊಳ್ಳಲು ಅಸಾಧ್ಯವಾಗಲಿದೆ.
ಈ ನಿಟ್ಟಿನಲ್ಲಿ ಮುಂದಾಗುವ ಅಪಾಯ ತಡೆಗಟ್ಟುವಲ್ಲಿ ಸಾರ್ವಜನಿಕರು, ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು, ಜನಸಂದಣಿ ಹೆಚ್ಚಾಗದಂತೆ ನೋಡಿಕೊಳ್ಳುವುದು ಸೇರಿದಂತೆ ಕೊವಿಡ್-19 ನಿಯಂತ್ರಣ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕಿದೆ ಎಂದಿದ್ದಾರೆ.