ದೊಡ್ಡಬಳ್ಳಾಪುರ: ಕೋವಿಡ್-19 ವೈರಾಣು ಸೋಂಕು ಗಣನೀಯವಾಗಿ ಹೆಚ್ವುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಜಾರಿಗೊಳಿಸಿರುವ ಭಾನುವಾರದ ಲಾಕ್‌ಡೌನ್‌ಗೆ ನಗರದಲ್ಲಿ 4ನೇ ಭಾನುವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಮೆಡಿಕಲ್ ಸ್ಟೋರ್‍ಸ್, ಕ್ಲಿನಿಕ್‌ಗಳು, ಹಾಲಿನ ಬೂತ್ ಮೊದಲಾದ ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಉಳಿದ ವಹಿವಾಟುಗಳು ಮಧ್ಯಾಹ್ನನದ ನಂತರ ಸ್ಥಬ್ದವಾಗಿದ್ದವು.ಮಧ್ಯಾಹ್ನ 12 ಗಂಟೆಯ ನಂತರ ಪೊಲೀಸರು ಕೆಲವು ಅಂಗಡಿಗಳನ್ನು ಬಂದ್ ಮಾಡಿಸಿದ ಪ್ರಸಂಗ ನಡೆಯಿತು.
ತಾಲೂಕಿನ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ ಪ್ರಮುಖ ದೇವಾಯಗಳನ್ನು ಮುಚ್ಚಲಾಗಿತ್ತು.
ರಸ್ತೆಯಲ್ಲಿ ಸಂಚಾರ ವಿರಳವಾಗಿ, ಸದಾ ವಾಹನ ಸಂಚಾರದಿಂದ ಗಿಜಿಗುಡುತ್ತಿದ್ದ ಬಸ್ ನಿಲ್ದಾಣ,ಮುಖ್ಯರಸ್ತೆ,ಡಿ.ಕ್ರಾಸ್,ಟಿ.ಬಿ.ವೃತ್ತ,ತಾಲೂಕು ಕಚೇರಿ ವೃತ್ತಗಳಲ್ಲಿ ವಾಹನಗಳ ಹಾಗೂ ಜನಸಂಚಾರವಿರಲಿಲ್ಲ.ಭಾನುವಾರವಾದ್ದರಿಂದ ನಗರದಲ್ಲಿ ನೇಕಾರಿಕೆ ಸ್ಥಬ್ದವಾಗಿತ್ತು.ಕಳೆದ ವಾರ ಜಿಲ್ಲೆ ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್ ಇದ್ದುದರಿಂದ ಭಾನುವಾರದ ಲಾಕ್‌ಡೌನ್ ಸಹ ಯಶಸ್ಸಾಗಿತ್ತು.ಆದರೆ ಈ ಭಾನುವಾರ ಲಾಕ್‌ಡೌನ್ ಅನ್ನು ಜನರಿಗೆ ನೆನಪಿಸಬೇಕಾಗಿತ್ತು.
ಅಂತರ ಪಾಲನೆಗೆ ಒತ್ತು ನೀಡಲು ಆಗ್ರಹ:
ಒಂದೆಡೆ ಲಾಕ್‌ಡೌನ್ ಕಾರಣದಿಂದಾಗಿ ಇಡೀ ನಗರ ಸ್ಥಬ್ದವಾಗಿತ್ತು ಎನ್ನುತ್ತಿದ್ದರೆ, ಎಪಿಎಂಸಿ,ಮಾರುಕಟ್ಟೆ ಪ್ರದೇಶಗಳಲ್ಲಿ ತರಕಾರಿ, ದಿನಸಿ ಕೊಳ್ಳಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.ಕೆಲವು ಮಾಂಸದಂಗಡಿಗಳ ಮುಂದೆ ಜನರು ಸಾಲಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತು.
ಈ ನಿಟ್ಟಿನಲ್ಲಿ ಜನ ಸಂದಣಿ ಇರುವಲ್ಲಿ ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ನಿಯಂತ್ರಣ ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.