ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರು ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಸುಗಮವಾಗಿ ಪ್ರಾರಂಭವಾಗಿದೆ.
ಮೊದಲ ದಿನ ಬೆಳಿಗ್ಗೆ ಜೀವಶಾಸ್ತ್ರ ವಿಷಯಕ್ಕೆ 1671 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಮತ್ತು 407 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.ನಂತರ ಮಧ್ಯಾಹ್ನ ನಡೆದ ಗಣಿತ ವಿಷಯಕ್ಕೆ 1963 ವಿದ್ಯಾರ್ಥಿಗಳು ಹಾಜರಾಗಿದ್ದರು ಮತ್ತು 112 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ 3 ಮಂದಿ ಕೋವಿಡ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ದೊಡ್ಡಬಳ್ಳಾಪುರ,ನೆಲಮಂಗಲ ಮತ್ತು ಹೊಸಕೋಟೆ ಸೇರಿದಂತೆ ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ಸುಗಮವಾಗಿ ನಡೆದಿದೆ.ಜು.31 ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ರಾಮಕೃಷ್ಣ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಸಮಯಕ್ಕಿಂತ ಮುಂಚಿತವಾಗಿ ಬಂದಿದ್ದರು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರದೊಂದಿಗೆ ಬಂದ ವಿದ್ಯಾರ್ಥಿಗಳನ್ನು ಅರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿಯವರು ಸ್ಕ್ರೀನಿಂಗ್ ನಡೆಸಿದರು.ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಮತ್ತು ಕೊಠಡಿ ಮೇಲ್ವಿಚಾರಕರು ಮತ್ತು ಸಿಬ್ಬಂದಿಯವರ ಮಾರ್ಗದರ್ಶನದಂತೆ ಪರೀಕ್ಷಾ ಕೊಠಡಿಗಳಿಗೆ ವಿದ್ಯಾರ್ಥಿಗಳು ಪ್ರವೇಶ ಮಾಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು. ಪರೀಕ್ಷೆ ಮುಗಿಯುವ ತನಕ ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿಯವರು ಪರೀಕ್ಷಾ ಕೇಂದ್ರದಲ್ಲೆ ಹಾಜರಿದ್ದರು. ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿಗಳು ನೇಮಿಸಿದ್ದ ತಾಲೂಕು ಸಮಿತಿಯ ಅಧಿಕಾರಿಗಳು ಭೇಟಿ ನೀಡಿದ್ದರು. ಪರೀಕ್ಷಾ ಕೇಂದ್ರಗಳ ವೀಕ್ಷಕರು, ತ್ರಿಸದಸ್ಯ ಸಮಿತಿ ಅಧಿಕಾರಿಗಳು, ಜಾಗೃತಿ ದಳದ ಸದಸ್ಯರು ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೃಶ್ಯ ಕಂಡು ಬಂತು.
ದೊಡ್ಡಬಳ್ಳಾಪುರ ತಾಲೂಕಿನ ಶ್ರೀಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜು, ಶ್ರೀದೇವರಾಜ ಅರಸು ಪದವಿ ಪೂರ್ವ ಕಾಲೇಜು,ಸರಕಾರಿ ಪದವಿ ಪೂರ್ವ ಕಾಲೇಜು, ಹೊಸಕೋಟೆ ತಾಲೂಕಿನ ಸರಕಾರಿ ಬಾಲಕಿಯ ಪದವಿ ಪೂರ್ವ ಕಾಲೇಜು ಮತ್ತು ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಹಾಗೂ ನೆಲಮಂಗಲ ತಾಲೂಕಿನ ಬಸವೇಶ್ವರ ಬಾಲಕಿಯ ಪದವಿ ಪೂರ್ವ ಕಾಲೇಜುಗಳಲ್ಲಿ ನಡೆದ ಸಿಇಟಿ ಪರೀಕ್ಷೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿಗಳ ಜೊತೆಗೆ ರಾಜ್ಯದ ವಿವಿದೆಡೆ ಮತ್ತು ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಸಹ ಜಿಲ್ಲೆಯ ಪರೀಕ್ಷಾ ಕೇಂದ್ರಗಳನ್ನು ಅಯ್ಕೆ ಮಾಡಿದ್ದಾರೆ.ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಯ ಸರಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು,ರಾಜ್ಯದ ವಿವಿಧ ವಸತಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದವರು ಜಿಲ್ಲೆಯ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಕಂಡು ಬಂದರು.
ಈ ಬಾರಿ ಸಿಇಟಿ ಪರೀಕ್ಷಾ ಕೊಠಡಿಗಳಲ್ಲಿ ಒಂದು ಕೊಠಡಿ 24 ವಿದ್ಯಾರ್ಥಿಗಳಿದ್ದರು. ಕಳೆದ ವರ್ಷಗಳಲ್ಲಿ ನಡೆದಿರುವ ಸಿಇಟಿ ಪರೀಕ್ಷೆಯಲ್ಲಿ ಒಂದು ಕೊಠಡಿಗೆ 15 ವಿದ್ಯಾರ್ಥಿಗಳು ಇರುತ್ತಿದ್ದರು.ವಿದ್ಯಾರ್ಥಿಗಳು ತಮ್ಮ ಸಿಇಟಿ ಪ್ರವೇಶ ಪತ್ರದೊಂದಿಗೆ ತಮ್ಮ ಕಾಲೇಜಿನ ಗುರುತಿನ ಚೀಟಿ, ಆಧಾರ್ ಕಾರ್ಡ್‌ಗಳನ್ನು ಹೆಚ್ಚಿನ ವಿದ್ಯಾರ್ಥಿಗಳು ತಂದಿದ್ದರು.ಪರೀಕ್ಷಾ ಕೊಠಡಿಗಳಿಗೆ ಕೈಗಡಿಯಾರ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ ನಿರ್ಬಂಧವಿತ್ತು. ವಿದ್ಯಾರ್ಥಿಗಳನ್ನು ಪೋಷಕರು ತಮ್ಮ ಸ್ವಂತ ವಾಹನಗಳಲ್ಲಿ ಕರೆತಂದು ಪರೀಕ್ಷಾ ಕೇಂದ್ರ ಬಳಿಗೆ ಬಿಟ್ಟು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರತಿಕ್ರಿಯೆ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ 2015 ರಿಂದ ಸಿಇಟಿ ಪರೀಕ್ಷಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು.ಈ ವರ್ಷ ಜಿಲ್ಲೆಯ ಹೊಸಕೋಟೆ ಮತ್ತು ನೆಲಮಂಗಲ ತಾಲೂಕಿನಲ್ಲೂ ಸಿಇಟಿ ಪರೀಕ್ಷಾ ಕೇಂದ್ರಗಳು ಪ್ರಾರಂಭವಾಗಿರುವುದು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ವರ್ಷ ವರ್ಷಕ್ಕೆ ಹೆಚ್ಚಾಗಿದೆ.ಇದ್ದರಿಂದಾಗಿ ಜಿಲ್ಲೆಯ ಈ ವರ್ಷ ಅರು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯುತ್ತಿದ್ದಾರೆ. ಸಿಇಟಿ ಪರೀಕ್ಷೆ ಸುಗಮವಾಗಿ ನಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಪರೀಕ್ಷೆ ನಡೆಸುವ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಯವರಿಗೆ ತರಬೇತಿಗಳನ್ನು ನೀಡಲಾಗಿತ್ತು.ಕೋವಿಡ್-19 ಪ್ರಯುಕ್ತ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಜರ್, ಥಾರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಅರೋಗ್ಯ ಇಲಾಖೆ ವತಿಯಿಂದ ಮಾಡಲಾಗಿದೆ. ವಿದ್ಯಾರ್ಥಿಗಳು ಸುಗಮವಾಗಿ ಪರೀಕ್ಷೆ ಬರೆಯಲು ಅನುಕೂಲವಾಗುವ ಎಲ್ಲಾ ವ್ಯವಸ್ಥೆಯನ್ನು ಪರೀಕ್ಷಾ ಕೇಂದ್ರಗಳಲ್ಲಿ ಮಾಡಿದ್ದಾರೆ: ಎಂ.ರಾಮಕೃಷ್ಣ, ಉಪನಿರ್ದೇಶಕರು. ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ.