ದೊಡ್ಡಬಳ್ಳಾಪುರ: ರಾಜ್ಯದ ಸಹಕಾರಿ ಬ್ಯಾಂಕ್ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿರುವ ಬೀರೇಶ್ವರ ಕೋ ಆಪ್ ಕ್ರೇಡಿಟ್ ಬ್ಯಾಂಕ್ ಸಾಮಾನ್ಯ ಜನರ ಆರ್ಥಿಕ ಪ್ರಗತಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ಬ್ಯಾಂಕಿನ ದೊಡ್ಡಬಳ್ಳಾಪುರ ಶಾಖೆಯ ಅಧ್ಯಕ್ಷ ಹುಲಿಕಲ್ ನಟರಾಜ್ ಹೇಳಿದರು.
ಅವರು ಶುಕ್ರವಾರ ನಗರದ ಬೀರೇಶ್ವರ ಕೋ ಆಪ್ ಕ್ರೇಡಿಟ್ ಬ್ಯಾಂಕಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕೊರೊನಾದಿಂದಾಗಿ ದೇಶದಲ್ಲಿನ ಆರ್ಥಿಕ ಸಂಕಷ್ಟದ ನಡುವೆಯು ಸಹ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ರೂ1.4 ಕೋಟಿ ಲಾಭಗಳಿಸಿದೆ. ಬ್ಯಾಂಕ್ ಇಲ್ಲಿಯವರೆಗೆ ರೂ10.5 ಕೋಟಿ ಠೇವಣಿ ಸಂಗ್ರಹ ಮಾಡಿದೆ. ಈ ವರ್ಷ 40 ಲಕ್ಷ ಸಾಲ ನೀಡುವ ಗುರಿ ಹೊಂದಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲು ತ್ವರಿತವಾಗಿ ಸಾಲ ಸೌಲಭ್ಯ ಹಾಗೂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲಾಗುತ್ತಿದೆ. ಬ್ಯಾಂಕ್ ಠೇವಣಿ ಸಂಗ್ರಹ ಹಾಗೂ ಸಾಲ ನೀಡಿಕೆಗಷ್ಟೇ ಸೀಮಿತವಾಗಿರದೆ ಗ್ರಾಹಕರ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳ ಸೇವೆಯನ್ನು ಕಲ್ಪಿಸುತ್ತಿದೆ ಎಂದರು.
ಸಭೆಯಲ್ಲಿ ಬೀರೇಶ್ವರ ಕೋ ಆಪ್ ಕ್ರೇಡಿಟ್ ಬ್ಯಾಂಕ್ ದೊಡ್ಡಬಳ್ಳಾಪುರ ಶಾಖೆಯ ಉಪಾಧ್ಯಕ್ಷ ಎಸ್.ಪ್ರಕಾಶ್, ನಿರ್ದೇಶಕರಾದ ಕೆ.ಎಂ.ಹನುಮಂತರಾಯಪ್ಪ, ಆರ್.ಎಸ್.ಮಂಜುನಾಥ್, ಬಿ.ಪಿ.ಶ್ರೀನಿವಾಸ್‌ಮೂರ್ತಿ, ಎಚ್.ಎಸ್.ನಾಗೇಶ್, ಎನ್.ಎಂ.ನಟರಾಜ,ಬ್ಯಾಂಕಿನ ವ್ಯವಸ್ಥಾಪಕ ಬಿ.ಎನ್.ಪಾಟೀಲ್ ಇದ್ದರು.