ಬೆಂಗಳೂರು: ಕೋವಿಡ್-19 ಸಾಕ್ರಮಿಕ ರೋಗ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶಕ್ಕಾಗಿ.ವಾರ್ಡ್ ಹಂತದ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಪ್ರಯತ್ನಗಳನ್ನು ಹೆಚ್ಚಿಸುವ ಸಲುವಾಗಿ ಸಿಬ್ಬಂದಿಗಳನ್ನು ನೇಮಿಸುವ ಕ್ರಮದಲ್ಲಿ ನಿಯಮ ಉಲ್ಲಂಘನೆಯಾಗಿದ್ದು,ಶಿಕ್ಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ಪತ್ರಬರೆದಿದ್ದಾರೆ.
ಪತ್ರದ ಅಂಶದಂತೆ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋವಿಡ್-19 ಸಾಕ್ರಮಿಕ ರೋಗ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶಕ್ಕಾಗಿ. ವಾರ್ಡ್ ಹಂತದ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಪ್ರಯತ್ನಗಳನ್ನು ಹೆಚ್ಚಿಸುವ ಸಲುವಾಗಿ ಸಿಬ್ಬಂದಿಗಳನ್ನು ನೇಮಿಸುವ ಕ್ರಮದಲ್ಲಿ ಆಯೋಜಿಸುವ ಕ್ರಮದಲ್ಲಿ 55 ವರ್ಷಗಳ ವಯಸ್ಸನ್ನು ಮೀರಿರುವ, ವಿಕಲಚೇತನರು,ಗರ್ಭಿಣಿಯರು ಹಾಗೂ ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಸರ್ಕಾರದ ದಿನಾಂಕ :24/07/2020 ರ ಟಿಪ್ಪಣಿಯಲ್ಲಿ ವಿನಾಯ್ತಿಯನ್ನು ನೀಡಲಾಗಿದೆ.ಅದಾಗಿಯೂ ಮೇಲೆ ವಿವರಿಸಿರುವ ಮಾನದಂಡಕ್ಕೆ ಒಳಪಡುವ ಶಿಕ್ಷಕರುಗಳನ್ನು ಸಹ ಪಾಲಿಕೆಯ ವತಿಯಿಂದ ಸದರಿ ಕರ್ತವ್ಯಕ್ಕಾಗಿ ನಿಯೋಜಿಸಲಾಗುತ್ತಿದೆ ಇದರಿಂದಾಗಿ ಶಿಕ್ಷಕರ ಸಮುದಾಯದಲ್ಲಿ ಗೊಂದಲ ಹಾಗೂ ಆತಂಕ ಸೃಷ್ಟಿಯಾಗಿರುತ್ತದೆ.
ಅಲ್ಲದೆ ಕೋವಿಡ್-19 ಕಣ್ಗಾವಲು ಸಮಿತಿಗೆ ನೇಮಿಸಿರುವ ಶಿಕ್ಷಕರನ್ನು ವಾರ್ಡ್ ಸಮಿತಿ ಹಾಗೂ ಬೂತ್ ಸಮಿತಿ ಈ ಎರಡು ಸಮಿತಿಗಳಿಗೂ ನೇಮಿಸಲಾಗಿರುತ್ತದೆ.ಈ ಸಮಿತಿಗಳಲ್ಲಿ ಬೇರೆ ಯಾವುದೇ ನೌಕರರುಗಳು ಇಲ್ಲದೆ ಇರುವುದರಿಂದ ಸಮಿತಿಯ ಎಲ್ಲಾ ಸದಸ್ಯರ ಕಾರ್ಯಭಾರವನ್ನು ಶಿಕ್ಷಕರುಗಳೇ ನಿರ್ವಹಿಸುತ್ತಿರುತ್ತಾರೆ. ತಮ್ಮ ಮಾರ್ಗಸೂಚಿಯನ್ವಯ ಶಿಕ್ಷಕರುಗಳನ್ನು ಅವರು ವಾಸವಾಗಿರುವ ವಾರ್ಡ್ ನ ಅಥವಾ ತೀರ ಅನಿವಾರ್ಯ ಸಂದರ್ಭದಲ್ಲಿ ಪಕ್ಕದ ವಾರ್ಡ್ ಗಳಿಗೆ ಮಾತ್ರ ನೇಮಿಸಬೇಕೆಂದು ನಿರ್ದಿಷ್ಟ ಸೂಚನೆ ಇದ್ದರೂ ಸಹ ಶಿಕ್ಷಕರುಗಳನ್ನು ಅವರು ವಾಸವಿರುವ ಸ್ಥಳಗಳಿಂದ ದೂರದ ವಾರ್ಡ್ ಗಳಿಗೆ ನಿಯೋಜಿಸಲಾಗುತ್ತಿದೆ, ಶಿಕ್ಷಕರು ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ ನಿಖರವಾದ ಕಾರ್ಯಸೂಚಿಯನ್ನು ಸಹ ನಿಗಧಿಪಡಿಸಿರುವುದಿಲ್ಲ.ಈ ಕುರಿತು ಪರಿಶೀಲಿಸಿ ಶಿಕ್ಷಕರುಗಳ ಅಹವಾಲುಗಳಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.