ದೊಡ್ಡಬಳ್ಳಾಪುರ: ಬಸವೇಶ್ವರ ನಗರದಲ್ಲಿ ಹಳೇಯ ದ್ವಷೇದ ಹಿನ್ನೆಲೆಯಲ್ಲಿ ಗೋವಿಂದರಾಜ್ ಎಂಬುವವರ ಮೇಲೆ ನಾಲ್ಕು ಜನ ಲಾಂಗಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.ಈ ಕುರಿತಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಹಲ್ಲೆಗೆ ಒಳಗಾಗಿರುವ ಗೋವಿಂದರಾಜು,ಸುಮಾರು 6 ತಿಂಗಳ ಹಿಂದೆ ಬಸವೇಶ್ವರ ನಗರದಲ್ಲಿ ಅಂಬರೀಶ್,ಮಂಜುನಾಥ್ ಎಂಬುವವರು ರಾತ್ರಿ ವೇಳೆ ಜನವಸತಿ ಪ್ರದೇಶದಲ್ಲಿ ಸ್ನೇಹಿತರ ಜನ್ಮ ದಿನಾಚರಣೆಗಳನ್ನು ನಡೆಸುತ್ತ ಪಟಾಕಿ ಸಿಡಿಸುತಿದ್ದರು. ಇದನ್ನು ವಿರೋಧಿಸಿ ಸ್ಥಳೀಯರೆಲ್ಲರು ಪೊಲೀಸರಿಗೆ ದೂರು ನೀಡಿದ್ದರು.ಪೊಲೀಸರಿಗೆ ದೂರು ನೀಡಿದ್ದರಲ್ಲಿ ನನ್ನ ಪಾತ್ರವು ಇದೆ ಎನ್ನುವ ಅನುಮಾನದ ಮೇಲೆ ಭಾನುವಾರ ರಾತ್ರಿ ಸ್ನೇಹಿತರೊಂದಿಗೆ ಬಂದು ಲಾಂಗಿನಿಂದ ಹಲ್ಲೆ ನಡೆಸಿದ್ದಾನೆ.ಲಾಂಗು ತಾಗಿ ಕೈ ಮೂಳೆ ಮುರಿದಿದೆ ಎಂದರು.
ಪುಂಡಾಟಿಕೆಗೆ ಕಡಿವಾಣ ಹಾಕಿ: ಬಸವೇಶ್ವರ ನಗರದಲ್ಲಿ ವಾಸವಾಗಿರುವ ಬಹುತೇಕ ಜನ ಕೂಲಿಕಾರ್ಮಿಕರು. ಹೀಗಾಗಿ ಇಷ್ಟು ವರ್ಷಗಳ ಕಾಲ ಅತ್ಯಂತ ಶಾಂತಿಯುತ ಪ್ರದೇಶವಾಗಿತ್ತು. ಯಾವುದೇ ಅಹಿತರಕ ಘಟನೆಗಳು ನಡೆಯುತ್ತಿರಲಿಲ್ಲ. ಆದರೆ ಕೆಲಸ ಮಾಡದೆ ತಿರುಗಾಡುತ್ತಿರುವ ಕೆಲ ಯುವಕರು ವಿನಾಕಾರಣ ಗಲಾಟೆಗಳನ್ನು ಮಾಡುತ್ತ ಜನರನ್ನು ತಮ್ಮ ಹಿಡತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದರ ಭಾಗವಾಗಿಯೇ ಭಾನುವಾರ ಇದೇ ಪ್ರಥಮ ಬಾರಿಗೆ ಬಸವೇಶ್ವರ ನಗರದಲ್ಲಿ ಲಾಂಗುಗಳನ್ನು ಜಳಪಿಸಲಾಗಿದೆ. ಪೊಲೀಸರು ಈಗಲೇ ಎಚ್ಚೆತ್ತುಕೊಂಡು ಪುಂಡರಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಸೋಮವಾರ ಬಸವೇಶ್ವರ ನಗರದ ಸಾರ್ವಜನಿಕರು ಸರ್ಕಲ್ಇನ್ಸ್ಪೆಕ್ಟರ್ ರಾಘವ ಎಸ್.ಗೌಡ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ತಂಡ ರಚನೆ: ಲಾಂಗಿನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿ ತಲೆಮರೆಸಿಕೊಂಡಿರುವ ಅಂಬರೀಶ್, ಪ್ರಶಾಂತ್, ವಿರೇಶ್ ಇವರ ಬಂಧನಕ್ಕೆ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದಾರೆ.ಮಂಜುನಾಥ್ ಎಂಬಾತನನ್ನು ಬಂಧಿಸಲಾಗಿದೆ.ಹಲ್ಲೆ ನಡೆಸಿ ಪರಾರಿಯಾಗುವ ಸಂದರ್ಭದಲ್ಲಿ ಆರೋಪಿಗಳು ಬಿಟ್ಟು ಹೋಗಿರುವ ಬೈಕ್, ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.