ದೊಡ್ಡಬಳ್ಳಾಪುರ: ತಾಲ್ಲೂಕಿನ ಶ್ರೀರಾಮನಹಳ್ಳಿ ಮಾರ್ಗವಾಗಿ ಶ್ರೀರಾಮನಹಳ್ಳಿ ಕಾಲೋನಿ, ಗಾಣದಾಳು ಮತ್ತು ಸಿಂಗೇನಹಳ್ಳಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ದುರಸ್ಥಿ ಕೈಗೊಳ್ಳುವ ಕುರಿತಂತೆ ಮಂಗಳವಾರ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕು ಕೇಂದ್ರದಿಂದ ಸುಮಾರು 25 ಕಿ.ಮೀ ದೂರದ ಶ್ರೀರಾಮನಹಳ್ಳಿ,ಗಾಣದಾಳು, ಸಿಂಗೇನಹಳ್ಳಿ, ದಾಸರಪಾಳ್ಯ ಗ್ರಾಮಗಳ ರಸ್ತೆಗಳು ಹಾಳಾಗಿ ದಶಕಗಳೇ ಕಳೆದಿವೆ.ಈ ಬಗ್ಗೆ ಹಲವಾರು ಬಾರಿ ಈ ಭಾಗದ ಜನ ಮನವಿಗಳನ್ನು ಮಾಡಲಾಗಿತ್ತು.ಮಳೆಗಾಲದಲ್ಲಿ ರಸ್ತೆಗಳಲ್ಲಿ ಒಡಾಡಲು ಕಷ್ಟ ಎನ್ನುವ ದೂರುಗಳು ಕೇಳಿ ಬರುವುದು ಸಾಮಾನ್ಯ.ಆದರೆ ನಮ್ಮೂರಿನ ರಸ್ತೆಗಳಲ್ಲಿ ಬೇಸಿಗೆಯಲ್ಲೂ ಸಹ ಬರಲು ಕಷ್ಟವಾಗುತಿತ್ತು.ಅಷ್ಟರಮಟ್ಟಿಗೆ ರಸ್ತೆಗಳು ಹಾಳಾಗಿ ಹೋಗಿವೆ.ರಸ್ತೆ ಸಂಪರ್ಕ ಉತ್ತಮವಾಗಿಲ್ಲದ ಹಿನ್ನೆಲೆಯಲ್ಲಿ ಈ ಭಾಗದಿಂದ ರೈತರು ಮಾರುಕಟ್ಟೆಗೆ ಹಣ್ಣು,ತರಕಾರಿ ಮತ್ತಿತರೆ ವಸ್ತುಗಳನ್ನು ತೆಗೆದುಕೊಂಡು ಹೋಗಲು ಹರಸಾಹಸ ಪಡುವಂತಾಗಿತ್ತು ಎಂದು ಗ್ರಾಮಸ್ಥರು ಹೇಳಿದರು.
ಶ್ರೀರಾಮನಹಳ್ಳಿ ಸಮೀಪ ಹರಿದು ಹೋಗುವ ದೊಡ್ಡಹಳ್ಳಕ್ಕೆ ಸೂಕ್ತ ಸೇತುವೆ ನಿರ್ಮಿಸಿದರೆ ಜನ ಸಂಚಾರಕ್ಕೆ, ಮಳೆಗಾಲದಲ್ಲಿ ಹಳ್ಳದಲ್ಲಿ ನೀರು ತುಂಬಿ ಹರಿಯುತ್ತಿದ್ದರು ಸಹ ರೈತರು ತಮ್ಮ ಹೊಲಗಳಿಗೆ ಹೋಗಲು ಸಲುಭವಾಗುತ್ತದೆ ಎನ್ನುವ ಒತ್ತಾಯವನ್ನು ಹಲವಾರು ವರ್ಷಗಳಿಂದ ಮಾಡುತ್ತಲೇ ಬರಲಾಗುತ್ತಿದೆ. ಈ ಭಾಗದಲ್ಲಿ ರಸ್ತೆ ದುರುಸ್ಥಿ ಮಾಡುವ ಸಂದರ್ಭದಲ್ಲಿಯೇ ದೊಡ್ಡಹಳ್ಳದಲ್ಲಿ ಸೇತುವೆ ನಿರ್ಮಾಣವನ್ನು ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ರಸ್ತೆ ದುರಸ್ಥಿ ಕುರಿತಂತೆ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಹಾಯಕ ಎಂಜಿನಿಯರ್ ತ್ಯಾಗರಾಜ್ ಹಾಗೂ ಗ್ರಾಮಸ್ಥರು ಹಾಜರಿದ್ದರು.