ದೊಡ್ಡಬಳ್ಳಾಪುರ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿದ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಕಾರ್ಯಕ್ರಮವನ್ನು ಸಂಭ್ರಮಿಸಲಾಯಿತು.ಹಿಂದು ಕಾರ್ಯಕರ್ತರು ಮನೆಗಳಲ್ಲಿ ದೀಪಗಳನ್ನು ಬೆಳಗಿ,ಭಗವಾನ್ ಧ್ವಜ ಹಾರಿಸುವ ಮೂಲಕ ಹಬ್ಬದ ರೀತಿ ಆಚರಿಸಿದರು.ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.
ನಗರದ ಹೇಮಾವತಿ ಪೇಟೆಯ ಯುವಕರ ಸಂಘ,ಹೇಮಾವತಿ ಪೇಟೆಯ ಶಬರಿ ಬೇಕರಿ ಅಮರ್‌ನಾಥ್,ಕೋಟೆ ರಸ್ತೆ ನಾಗರಿಕರಿಂದ ಶ್ರೀರಾಮ ಭಾವಚಿತ್ರವನ್ನು ಇಟ್ಟು ಭಗವಾನ್ ಧ್ವಜ,ಕೇಸರಿ ತೋರಣಗಳನ್ನು ಕಟ್ಟಿ ಪೂಜೆ ಸಲ್ಲಿಸಿ ಸಿಹಿ ವಿತರಿಸಲಾಯಿತು. ತಾಲೂಕಿನ ಅರೆಹಳ್ಳಿ ಗುಡ್ಡದಳ್ಳಿ ಶ್ರೀ ರಾಮ ದೇವಾಲಯ, ಖಾಸ್‌ಬಾಗ್,ದೊಡ್ಡತುಮಕೂರಿನ ರಾಮ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿದವು.
ತಾಲೂಕಿನ ವಿವಿದೆಡೆಗಳಲ್ಲಿ ರಾಮನ ಭಾವಚಿತ್ರಕ್ಕೆ ನಮನ ಸಲ್ಲಿಸಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಯೋದ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡುತ್ತಿದ್ದ ನೇರ ಪ್ರಸಾರವನ್ನು, ರಾಮ ಭಕ್ತರು, ಸಾರ್ವಜನಿಕರು ವೀಕ್ಷಿಸಿ ಸಂಭ್ರಮಿಸಿದರು.
ಬಿಜೆಪಿ,ವಿಶ್ವ ಹಿಂದು ಪರಿಷತ್ ಭಜರಂಗ ದಳ, ಹಿಂದು ಜಾಗರಣ ವೇದಿಕೆ ಮೊದಲಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ಸಿಹಿ ವಿತರಿಸಲಾಯಿತು.
1992ರಲ್ಲಿ ರಾಮ ಜನ್ಮ ಭೂಮಿ ನಿರ್ಮಾಣಕ್ಕಾಗಿ ತೆರಳಿ, ಹುತಾತ್ಮರಾದ ಕರಸೇವಕರಿಗೆ ಹಿಂದೂ ಜಾಗರಣಾ ವೇದಿಕೆ ತಾಲೂಕಿನಾದ್ಯಂತ 20 ವೃತ್ತಗಳಲ್ಲಿ ನಮನ ಸಲ್ಲಿಸಲಾಯಿತು.
ದೊಡ್ಡಬಳ್ಳಾಪುರದ ಬಜರಂಗದಳ ಅಂಜನ್ರಾ ಟ್ರಸ್ಟ್ ಮೂಲಕ 5 ಸಾವಿರ ಮನೆಗಳಿಗೆ ದೀಪ ಹಾಗೂ ರಾಮನ ಭಾವಚಿತ್ರವನ್ನು ಹಂಚುವ ಕಾರ್ಯ ಮಾಡಲಾಯಿತು.