ಚಿಕ್ಕಮಗಳೂರು: ರಾಜ್ಯದಲ್ಲಿ ಪರಿಸರಕ್ಕೆ ಪೂರಕವಾಗುವಂತೆ ಹಾಗೂ ಜನತೆ ಮತ್ತು ಅಧಿಕಾರಿಗಳ ಸಹಭಾಗಿತ್ವ ಒಳಗೊಂಡ ನೂತನ ಪ್ರವಾಸೋದ್ಯಮ ನೀತಿಯನ್ನು ಮುಂದಿನ ೫ ವರ್ಷದ ಕಾಲ ಜಾರಿಗೆ ತರಲಾಗುವುದು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಹೇಳಿದರು.
ಇಂದು ಕಡೂರು ತಾಲ್ಲೂಕು ಸಖರಾಯಪಟ್ಟಣದ ಬಳಿಯ ಅಯ್ಯನ ಕೆರೆಯಲ್ಲಿ ಪ್ರವಾಸೋದ್ಯಮ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಾಹಸ ಕ್ರೀಡಾ ತರಬೇತಿ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಅಯ್ಯನ ಕೆರೆಯಲ್ಲಿ ಆರಂಭವಾಗುತ್ತಿರುವ ಸಾಹಸ ಕ್ರೀಡಾ ಚಟುವಟಿಕೆಗಳಿಂದ ಇಲ್ಲಿನ ಯುವ ಜನತೆಯು ಸಾಹಸ ಪ್ರವೃತ್ತಿ, ಪ್ರಾಕೃತಿಕ ವಿಕೋಪದ ಸಂದರ್ಭ ನೆರವಿಗೆ ಧಾವಿಸುವುದು ಜೊತೆಗೆ ಸ್ವ-ಉದ್ಯೋಗ ಹೊಂದುವ ಅವಕಾಶ ದೊರೆಯಲಿದೆ ಇದನ್ನೇ ಉದ್ದೇಶವಾಗಿರಿಸಿಕೊಂಡು ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯು ಕಾರ್ಯಪ್ರವೃತ್ತವಾಗಿದೆ ಎಂದ ಅವರು ಇದರಿಂದಾಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹಾಗೂ ಕ್ರೀಡೆಯನ್ನು ಪ್ರೋತ್ಸಾಹಿಸಿ ಅಭಿವೃದ್ದಿ ಪಡಿಸಲು ಸಾಧ್ಯವಾಗಲಿದೆ ಎಂದರು.
ಕೆರೆಯ ಸುತ್ತಲೂ ಪರಿಸರಕ್ಕೆ ಪೂರಕವಾಗುವಂತಹ ಮರ-ಗಿಡಗಳನ್ನು ಬೆಳೆಸುವುದು ಜೊತೆಗೆ ಸೈಕಲ್ ಪಥ ನಿರ್ಮಾಣ ಮಾಡಿ ಕ್ರೀಡೆಗೆ ಮತ್ತಷ್ಟು ಆದ್ಯತೆ ನೀಡಲಾಗುವುದು ಈಗಾಗಲೇ ಈ ಭಾಗದ ರಸ್ತೆಗೆ ರೂ.೭ ಕೋಟಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ ಕಾಮಗಾರಿ ಕೆಲಸಗಳು ಆರಂಭವಾಗಬೇಕಿದೆ ಎಂದರು.
ಕೆರೆಯ ಮಾಲಿನ್ಯವಾಗದಂತೆ ಪರಿಸರಕ್ಕೆ ಪೂರಕವಾಗುವಂತಹ ಕ್ರೀಡಾ ತರಬೇತಿ ಚಟುವಟಿಕೆಗಳನ್ನು ಇಲ್ಲಿ ಆಯೋಜಿಸಲಾಗುವುದು ಅಲ್ಲದೇ ಈ ಭಾಗದ ರೈತರುಗಳಿಗೆ ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಸ್ವಚ್ಚತೆ ಹಾಗೂ ನಿರ್ವಹಣೆಗೆ ಹೆಚ್ಚು ಆದ್ಯತೆ ನೀಡಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಪ್ರವಾಸಿತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ನೂತನ ಪ್ರವಾಸೋದ್ಯಮ ನೀತಿಗೆ ಸಂಬಂಧಿಸಿದಂತೆ ಅದರ ಕರಡನ್ನು ಅಂತಿಮಗೊಳಿಸುವ ಕಾರ್ಯ ನಡೆಯುತ್ತಿದ್ದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹಣಕಾಸು ಹಾಗೂ ಯೋಜನಾ ಇಲಾಖೆ ಒಪ್ಪಿಗೆ ಬಳಿಕ ಕ್ಯಾಬಿನೆಟ್‌ನಲ್ಲಿ ಮಂಡಿಸಿ ಅನುಮೋದನೆ ಪಡೆದು ನಂತರ ಜಾರಿಗೊಳಿಸಲಾಗುವುದು. ಹೊಸ ಪ್ರವಾಸೋದ್ಯಮ ನೀತಿಯು ೨೦೨೦ ರಿಂದ ೨೦೨೫ ರ ವರೆಗಿನ ೫ ವರ್ಷದ ಕಾಲ ಜಾರಿಯಲ್ಲಿರಲಿದ್ದು ಇದರಲ್ಲಿ ಅಧಿಕಾರಿ ವರ್ಗ ಹಾಗೂ ಜನರ ಸಹಭಾಗಿತ್ವ ಕೂಡ ಇರಲಿದೆ ಎಂದ ಅವರು ಜಿಲ್ಲಾ ಮಟ್ಟದಲ್ಲಿಯೂ ನೀತಿಗೆ ಸಂಬಂಧಿಸಿದಂತೆ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದ್ದು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಅಧಿಕಾರದೊಂದಿಗೆ ನಿಯಂತ್ರಣವನ್ನು ನೀಡುವ ಕುರಿತು ಕರಡು ರಚನೆಯಾಗುತ್ತಿದ್ದು ಇದು ಅನುಮೋದನೆಗೊಂಡ ಬಳಿಕ ಸಾರ್ವಜನಿಕವಾಗಿ ಚಾಲ್ತಿಗೆ ಬರಲಿದೆ ಎಂದರು.
ಜಿಲ್ಲೆಯಲ್ಲಿ ಕಳೆದ ಬಾರಿಯಂತೆ ಪ್ರವಾಹದ ಪರಿಸ್ಥಿತಿ ಎದುರಾಗಿಲ್ಲ, ಉದ್ಭವವಾದಲ್ಲಿ ಅದನ್ನು ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ ಜಿಲ್ಲೆಯಲ್ಲಿ ಶಾಶ್ವತ ನೀರಾವರಿಗಾಗಿ ೧೩೫೦ ಕೋಟಿಯ ಡಿ.ಪಿ.ಆರ್ ತಯಾರಿಸಲಾಗಿದೆ ಕೋವಿಡ್-೧೯ ಹಿನ್ನೆಲೆಯಿಂದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹಂತಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಜೊತೆಗೆ ಹಿರೇಕೊಳಲೆ, ಬಸವನಹಳ್ಳಿಯ ಕೆರೆಗಳ ಅಭಿವೃದ್ಧಿಗೆ ರೂಪುರೇಷೆಗಳನ್ನು ಸಿದ್ದಪಡಿಸಲಾಗಿದೆ ಎಂದರು.
ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ಮಾತನಾಡಿ ಅಯ್ಯನ ಕೆರೆಯು ಈ ಭಾಗದ ಜನರಿಗೆ ಜೀವನಾಡಿಯಿದ್ದಂತೆ ಇಲ್ಲಿ ಕ್ರೀಡಾಚಟುವಟಿಕೆಗಳನ್ನು ಆಯೋಜಿಸಿರುವುದು ಖುಷಿಯ ವಿಚಾರ ಆದರೆ ಪರಿಸರ ಸೌಂದರ್ಯಕ್ಕೆ ಯಾವುದೇ ಹಾನಿಯಾದಂತೆ ರೈತರ ಹಿತದೃಷ್ಟಿಯಿಂದ ಚಟುವಟಿಕೆಗಳನ್ನು ಆಯೋಜಿಸಬೇಕು ಎಂದರು.
ರೈತರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ, ಇಲ್ಲಿನ ನೀರು ಅಚ್ಚುಕಟ್ಟುದಾರರ ಹಕ್ಕಾಗಿದ್ದು ನೀರು ಮಲಿನವಾಗದಂತೆ ನೀರಾವರಿ ಇಲಾಖೆಯವರು ನೋಡಿಕೊಳ್ಳಬೇಕು, ಜೊತೆಗೆ ಈ ಭಾಗದಲ್ಲಿನ ಮೀನು ಸಂಗ್ರಹಗಾರಗಳಿದ್ದು ಇವುಗಳ ಮೂಲಕ ಮೀನುಮರಿ ವಿತರಣೆ ಮಾಡುವಂತೆ ಅಧಿಕಾರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿ.ಜೆ. ಸೋಮಶೇಖರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶುಭಾ ಸತ್ಯಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್ ನಾಗರಾಜ್, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.