ಮಡಿಕೇರಿ: ಕೊಡಗು ಜಿಲ್ಲೆಯ ತಲಕಾವೇರಿ ಸಮೀಪದ ಬ್ರಹ್ಮಗಿರಿ ಬೆಟ್ಟ ಕುಸಿದಿರುವ ಪ್ರದೇಶಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಭೂ ಕುಸಿತ ಪ್ರದೇಶ ಕಂಡು ನೋವು ವ್ಯಕ್ತಪಡಿಸಿದ ಸಚಿವರು, ಬ್ರಹ್ಮಗಿರಿ ಬೆಟ್ಟದಲ್ಲಿ ಭೂಕುಸಿತದಿಂದ ತಲಕಾವೇರಿ ದೇವಾಲಯ ಪ್ರಧಾನ ಅರ್ಚಕರಾಗಿದ್ದ ನಾರಾಯಣಾಚಾರ್ ಕುಟುಂಬ ಮೂವರು ಮತ್ತು ಸಹ ಅರ್ಚಕರು ಇಬ್ಬರು ಸೇರಿ, ಒಟ್ಟು 5 ಮಂದಿ ಕಣ್ಮರೆಯಾಗಿದ್ದು, ಮಳೆ ಕಡಿಮೆಯಾದ ತಕ್ಷಣ ಕಾರ್ಯಾಚರಣೆ ಆರಂಭಿಸಲಾಗುವುದು. ಈಗಾಗಲೇ ಎನ್‍ಡಿಆರ್‍ಎಫ್ ತಂಡ ಬೀಡು ಬಿಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಎನ್‍ಡಿಆರ್‍ಎಫ್ ತಂಡ ಜಿಲ್ಲೆಯಲ್ಲಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಹಾಗೆಯೇ ವಿದ್ಯುತ್ ಮಾರ್ಗ ಸರಿಪಡಿಸುವುದು, ಮರಗಳು ರಸ್ತೆ ಮತ್ತು ವಿದ್ಯುತ್ ಕಂಬಕ್ಕೆ ತುಂಡಾಗಿ ಬದ್ದಲ್ಲಿ ತಕ್ಷಣವೇ ತೆರವು ಮಾಡುವ ಕಾರ್ಯ ನಡೆಯುತ್ತಿದೆ. ರಸ್ತೆ ಭಾಗದಲ್ಲಿ ಬರೆ ಕುಸಿದಲ್ಲಿ ತೆರವುಗೊಳಿಸಿ ಸಾರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ವಿ.ಸೋಮಣ್ಣ ಅವರು ವಿವರಿಸಿದರು.
ಪ್ರಕೃತಿ ವಿಕೋಪ ಎದುರಿಸುವಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಿದೆ. ಮುಖ್ಯಮಂತ್ರಿ ಅವರು ಯಾವುದೇ ತೊಂದರೆ ಆಗದಂತೆ ಗಮನ ಹರಿಸಬೇಕು ಎಂದು ಸೂಚಿದ್ದಾರೆ. ಆ ದಿಸೆಯಲ್ಲಿ ಜಿಲ್ಲೆಯ ಯಾವ ಯಾವ ಪ್ರದೇಶದಲ್ಲಿ ತೊಂದರೆಯಾಗುತ್ತಿದೆ ಅಂತಹ ಪ್ರದೇಶದ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ವಿರಾಜಪೇಟೆಯ ಅಯ್ಯಪ್ಪ ಬೆಟ್ಟ ಸೇರಿದಂತೆ ಇತರ ಅಪಾಯಕಾರಿ ಸ್ಥಳದಿಂದ ಅಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ ಎಂದು ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ತಿಳಿಸಿದ್ದಾರೆ.
ತ್ರಿವೇಣಿ ಸಂಗಮ ಪ್ರದೇಶವು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಭಾಗಮಂಡಲದಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ. ತಲಕಾವೇರಿಯ ಪರಿಸ್ಥಿತಿ ಅವಲೋಕಿಸುವ ನಿಟ್ಟಿನಲ್ಲಿ ಬೋಟ್ ಮುಖಾಂತರ ಖುದ್ದು ಭಾಗಮಂಡಲದ ಮತ್ತೊಂದು ಬದಿ ತಲುಪಿ ಬಳಿಕ ರಸ್ತೆ ಮಾರ್ಗವಾಗಿ ತಲಕಾವೇರಿಗೆ ತೆರಳಿದರು. ತಲಕಾವೇರಿ ಭೂ ಕುಸಿತ ಪ್ರದೇಶ ವೀಕ್ಷಣೆ ನಂತರ ಭಾಗಮಂಡಲದಲ್ಲಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಜತೆ ಮಾತನಾಡಿದರು. ಬಳಿಕ ಮಾತನಾಡಿದ ಅವರು ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದಿರುವ ಚಿತ್ರಣವನ್ನು ಕಂಡು ನಿಜಕ್ಕೂ ಆಘಾತವಾಯಿತು ಎಂದು ಅವರು ನುಡಿದರು.
ತಲಕಾವೇರಿ ಭಾಗದಲ್ಲಿ ಹೆಚ್ಚಿನ ಮಳೆ ಆಗುತ್ತಿದೆ. ಆದ್ದರಿಂದ ಎನ್ ಡಿ ಆರ್ ಎಫ್ ತಂಡದ ವತಿಯಿಂದ ರಕ್ಷಣಾ ಕಾರ್ಯ ಮಾಡಾಲಾಗಿಲ್ಲ. ನಾಳೆ ಎನ್‍ಡಿಆರ್‍ಎಫ್ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಲಿದೆ ಎಂದರು.
ನಾಳೆ ಬೆಳೆಗ್ಗೆ ಎನ್ ಡಿ ಆರ್ ಎಫ್ ಕಾರ್ಯಾಚರಣೆ ಮಾಡುತ್ತದೆ. ವಿರಾಜಪೇಟೆಯ ಅಯ್ಯಪ್ಪ ಬೆಟ್ಟ ಸೇರಿದಂತೆ ಇತರ ಅಪಾಯಕಾರಿ ಸ್ಥಳದಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಅರ್ಚಕರ ಮನೆಯಲ್ಲಿದ್ದ 40 ಕ್ಕೂ ಹೆಚ್ಚಿನ ಹಸುಗಳು ಕೊಚ್ಚಿಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಪ್ರಧಾನ ಅರ್ಚಕರ ಜೊತೆಗೆ ಮತ್ತೂ 4 ಜನ ಇದ್ದರು ಎಂಬ ಮಾಹಿತಿ ಇದೆ ಎಂದರು.
ಎಸ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ತಂಡ ಪರಿಸ್ಥಿತಿ ಎದುರಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ. ಜಿಲ್ಲೆಯ ಜನರು ಹೆದರುವ ಅಗತ್ಯವಿಲ್ಲ ಎಚ್ಚರಿಕೆಯಿಂದಿರಿ ಎಂದು ಸಚಿವರು ಸಲಹೆ ಮಾಡಿದರು.
ಪ್ರಧಾನ ಅರ್ಚಕರು ಅಧಿಕಾರಿಗಳ ಮಾತನ್ನು ಕೇಳಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ. ಕಳೆದ ಬಾರಿ ತೋರಾದಲ್ಲಿ ಆದಂತೆಯೇ ಇಲ್ಲಿಯೂ ಅನಾಹುತ ಆಗಿದೆ. ಈಗಾಗಲೇ ಪರಿಹಾರ ಕೇಂದ್ರಗಳಲ್ಲಿ ಜನರನ್ನು ಸುರಕ್ಷಿತವಾಗಿ ಇರಿಸಲಾಗಿದೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮುಖಾಂತರ ಕೊರೊನಾ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಬಂದವರನ್ನು ಪರಿಹಾರ ಕೇಂದ್ರದಲ್ಲಿ ಇರಿಸುತ್ತೇವೆ. ಪಾಸಿಟಿವ್ ಬಂದರೆ ನೇರವಾಗಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತದೆ. ಹಣ ಮುಖ್ಯ ಅಲ್ಲ, ಜನರ ಜೀವ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ವಿ.ಸೋಮಣ್ಣ ಹೇಳಿದರು.
ಸಂಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಕೊಡಗು ಜಲ್ಲೆಯಲ್ಲಿ ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಧಾರಾಕಾರ ಮಳೆ ಸುರಿದು ಸಂಕಷ್ಟಗಳು ಎದುರಾಗುತ್ತಿವೆ. ಆದ್ದರಿಂದ ಕೊಡಗು ಜಿಲ್ಲೆಗೆ ಪ್ರತಿ ವರ್ಷ ಬಜೆಟ್ ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಬ್ರಹ್ಮಗಿರಿ ಬೆಟ್ಟದಲ್ಲಿ ವ್ಯಾಪಕ ಮಳೆಯಿಂದಾಗಿ ರಕ್ಷಣಾ ಕಾರ್ಯಚರಣೆ ಕೈಗೊಳ್ಳಲು ಸಾಧ್ಯವಾಗಿಲ್ಲ. ಭಾಗಮಂಡಲದಿಂದ ತಲಕಾವೇರಿ ವರೆಗೆ ಅಲ್ಲಲ್ಲಿ ಬರೆ ಕುಸಿಯುತ್ತಿದೆ ಎಂದು ಅವರು ತಿಳಿಸಿದರು.
ಶಾಸಕರಾದ ಎಂ.ಪಿ ಅಪ್ಪಚ್ಚು ರಂಜನ್ ಅವರು ಮಾತನಾಡಿ ಕಳೆದ ಮೂರು ವರ್ಷದಿಂದ ಪ್ರಕೃತಿ ವಿಕೋಪದಿಂದ ಜಿಲ್ಲೆಗೆ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಪ್ರಕೃತ ವಿಕೋಪ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ಜಿ.ಪಂ ಅಧ್ಯಕ್ಷರಾದ ಬಿ.ಎ ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಇತರರು ಇದ್ದರು.