ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 1 ಸಾವಿರ ಕೋಟಿ ರೂ.ಗಳನ್ನು 50 ಲಕ್ಷ ರೈತರಿಗೆ ಬಿಡುಗಡೆಯಾಗಿದ್ದು, ಕಳೆದ ಶನಿವಾರ ಬೆ. 7 ಗಂಟೆಯಿಂದ ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಫೇಸ್‌ಬುಕ್ ಲೈವ್‌ನಲ್ಲಿ ರಾಜ್ಯದ ರೈತರ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಸಚಿವರು,ರೈತ ಬಾಂಧವರು ತಮ್ಮ ಖಾತೆಯನ್ನು ಪರಿಶೀಲಿಸಬೇಕೆಂದು ಮನವಿ ಮಾಡಿದ್ದಾರೆ.
2019-20ನೇ ಸಾಲಿನ ಬೆಳೆ ವಿಮೆ ಬರುವ ಮಂಗಳವಾರದಿಂದ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದ್ದು, ವಿಮೆಗಾಗಿ ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗುವುದಾಗಲೀ ಚಿಂತಿಸುವ ಅವಶ್ಯಕತೆಯಿಲ್ಲ.ಸರ್ಕಾರ ಮತ್ತು ಇಲಾಖೆ ಎಂದಿಗೂ ರೈತರೊಂದಿಗೆ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಸಚಿವರು ಹೇಳಿದರು.
ಇಲಾಖೆಯ ವೃಂದ ಮತ್ತು ನೇಮಕಾತಿ ಪ್ರಕ್ರಿಯೆಗೆ ನಿಯಮಗಳ ಕರಡು ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು ಆದಷ್ಟು ಬೇಗ “ರೈತಮಿತ್ರ” ರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಯೂರಿಯಾ ಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ.ಕಳೆದ ಸಾಲಿಗಿಂತ ಈ ವರ್ಷ ಶೇ. 25 ರಷ್ಟು ಹೆಚ್ಚಿನದಾಗಿ ಬಿತ್ತನೆಯಾಗಿದೆ. ಈ ವರ್ಷ 65ಸಾವಿರ ಮೆಟ್ರಿಕ್ ಟನ್ ಯೂರಿಯಾ ಹೆಚ್ಚಿನದಾಗಿ ಪೂರೈಕೆಯಾಗುತ್ತಿದ್ದು ಈ ವಾರ 37 ಸಾವಿರ ಟನ್ ಯೂರಿಯಾ ಸರಬರಾಜಾಗುತ್ತಿದೆ. ಯೂರಿಯಾವನ್ನು ರೈತರು ಭೂಮಿಗೆ ಎಷ್ಟು ಅಗತ್ಯವೋ ಅಷ್ಟು ಪ್ರಮಾಣದಲ್ಲಿ ಮಾತ್ರ ಬಳಸಬೇಕು.ಯಾವುದೇ ರಾಸಾಯನಿಕ ಔಷಧಿಯಾಗಲೀ ರಸಗೊಬ್ಬರವನ್ನಾಗಲೀ ಅಗತ್ಯಕ್ಕೆ ಅವಶ್ಯಕತೆಗೆ ಮೀರಿ ಬಳಸಬಾರದು.ಹೀಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಸಿದಲ್ಲಿ ಭೂಮಿಯ ಫಲವತ್ತತೆ ಕ್ಷೀಣಿಸುವ ಸಾಧ್ಯತೆಯೂ ಇದೆ.ಹೀಗಾಗಿ ರೋಗಕ್ಕೆ ಎಷ್ಟು ಮದ್ದಿನ ಅಗತ್ಯತೆಯಿದೆಯೋ ಅಷ್ಟನ್ನು ಮಾತ್ರ ಬಳಸಬೇಕು.ಯಾವುದೇ ರೋಗಕ್ಕಾಗಲೀ ಅಗತ್ಯಕ್ಕಿಂತ ಹೆಚ್ಚಿನ ಔಷಧಿ ಸೇವಿಸಿದಲ್ಲಿ ಅದು ವಿಷವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಕೃಷಿ ಸಚಿವರು ರೈತರಿಗೆ ಕಿವಿ ಮಾತು ಹೇಳಿದರು.