ದೊಡ್ಡಬಳ್ಳಾಪುರ: ಕರೊನಾ ಸೋಂಕಿನ ಲಕ್ಷಣಗಳಿದ್ದರು,ಚಿಕಿತ್ಸೆಗೆ ಬಾರದೆ ಮನೆಯಲ್ಲಿ ಸ್ವಯಂ ಚಿಕಿತ್ಸೆ ತೆಗೆದುಕೊಳ್ಳುವವರ ಕುರಿತು ನಿಗಾವಹಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ತಿಳಿಸಿದ್ದಾರೆ.
ನಗರ ಪ್ರದೇಶದ ಕೆಲ ವ್ಯಾಪ್ತಿಯಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು,ಆಸ್ಪತ್ರೆಗೆ ಚಿಕಿತ್ಸೆಗೆ ತೆರಳದೆ ಮನೆಯಲ್ಲಿ ಸ್ವಯಂ ಚಿಕಿತ್ಸೆ ತೆಗೆದುಕೊಳ್ಳುತ್ತಿರುವ ಕುರಿತು ಸಾರ್ವಜನಿಕರ ಆತಂಕದ ಹಿನ್ನೆಲೆ,ಹರಿತಲೇಖನಿ ತಾಲೂಕು ಆರೋಗ್ಯಾಧಿಕಾರಿಯ ಗಮನ ಸೆಳೆದಿದ್ದು ಈ ಕುರಿತಂತೆ ಉತ್ತರಿಸಿದ್ದಾರೆ.
ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಬರುವುದನ್ನ ಮುಂದೂಡುವಂತೆ ಆರೋಗ್ಯ ಇಲಾಖೆಯೇ ತಿಳಿಸಿದೆ.ಹಾಗೆಂದು ತೀವ್ರವಾದ ಕಾಯಿಲೆಗೆ ವೈದ್ಯರ ಸಲಹೆ ಪಡೆಯದೆ ತಾವೆ ಮಾತ್ರೆಗಳನ್ನು ಸೇವಿಸುವುದು ಅಪರಾಧವಾಗಿದೆ.ಅಲ್ಲದೆ,ಇಂತಹ ವ್ಯಕ್ತಿಗಳಲ್ಲಿ ಕರೊನಾ ಸೋಂಕು ತಗುಲಿದ್ದರೆ ಪ್ರಕರಣ ಮತ್ತೊಂದು ದಿಕ್ಕಿಗೆ ಸಾಗುತ್ತದೆ.
ಈ ಕುರಿತು ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು,ಮೆಡಿಕಲ್ ಸ್ಟೋರ್ ಗಳಲ್ಲಿ ಔಷಧಗಳನ್ನು ಖರೀದಿ ಮಾಡುವವರ ಮೇಲೆ ನೀಗಾ ಇಟ್ಟಿದ್ದು,ವಿಳಾಸ ಬರೆದುಕೊಳ್ಳಲಾಗುತ್ತಿದೆ.ಅಲ್ಲದೆ, ನಗರ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರು, ನಗರಸಭೆ ಸಿಬ್ಬಂದಿ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳ ನೆರವಿನೊಂದಿಗೆ ಗಂಟಲು ಮಾದರಿ ಪರೀಕ್ಷೆಯನ್ನು ಪಡೆಯಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ತಾಲೂಕಿನಲ್ಲಿ ಕರೊನಾ ಸೋಂಕು ನಿಯಂತ್ರಣ ಹಾಗೂ ಸೋಂಕಿತರ ಚಿಕಿತ್ಸೆಗಾಗಿ ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆಯು ಇತರ ಇಲಾಖೆಗಳ ಸಹಕಾರದೊಂದಿಗೆ ಅವಿರತ ಶ್ರಮಿಸುತ್ತಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಗುಣಮುಖರ ಸಂಖ್ಯೆ ಹೆಚ್ಚಳ
ಕರೊನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ತಲುಪಿರುವ ನಡುವೆಯೂ,ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳುವವರ ಸಂಖ್ಯೆ ಹೆಚ್ಚಿರುವುದರಿಂದ ತುಸು ನೆಮ್ಮದಿ ತಂದಿದೆ.ಆದರೆ ಸಾರ್ವಜನಿಕರು ಸೋಂಕಿ ಒಳಗಾಗದಂತೆ ಇಲಾಖೆ ನೀಡಿರುವ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.