ದೊಡ್ಡಬಳ್ಳಾಪುರ: ಸಾರ್ವಜನಿಕ ಗಣೇಶೋತ್ಸವ ನಿಷೇಧದ ಬಗ್ಗೆ ಈ ಹಿಂದೆ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ ಮಾರ್ಪಾಟು ಮಾಡಿ, ಪರಿಷ್ಕೃತ ಮಾರ್ಗಸೂಚಿ ಹೊರಡಿಸಿರುವುದು ಗಣೇಶ ಮಾರಾಟಗಾರರಲ್ಲಿ ಕೊಂಚ ಸಮಾಧಾನ ತಂದಿದೆ.
ಹಿಂದಿನ ಆದೇಶ :
ಈ ಬಾರಿ ಚೌತಿ ಹಬ್ಬವನ್ನು ಸರಳವಾಗಿ ಹಾಗೂ ಭಕ್ತಿಪೂರ್ವಕವಾಗಿ ದೇವಸ್ಥಾನಗಳ ಒಳಗೆ ಮತ್ತು ಮನೆಗಳಲ್ಲಿ ಮಾತ್ರವೇ ಆಚರಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಿಸುವಂತಿಲ್ಲ. ದೇವಾಲಯಗಳಲ್ಲಿ ಆಚರಿಸಲು ಅನುಮತಿ ಇದ್ದು, ಪ್ರತಿ ನಿತ್ಯ ಸ್ಯಾನಿಟೈಸೇಷನ್ ಕಡ್ಡಾಯ ಹಾಗೂ ಕಡ್ಡಾಯವಾಗಿ ಕೊವಿಡ್-19 ಮಾರ್ಗಸೂಚಿ ಪಾಲಿಸಲು ಸೂಚನೆ. ಗಣಪತಿ ವಿಗ್ರಹವನ್ನು ಮನೆಯಲ್ಲಿಯೇ ವಿಸರ್ಜಿಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕ ನದಿ, ಕೊಳ, ಕೆರೆ, ಬಾವಿ ಮತ್ತು ಕಲ್ಯಾಣಿಗಳಲ್ಲಿ ವಿಸರ್ಜಿಸುವಂತಿಲ್ಲ. ಮೆರವಣಿಗೆ ನಿರ್ಬಂಧ ಹಾಗೂ ಸ್ಥಳೀಯ ಸಂಸ್ಥೆ, ಪೊಲೀಸ್ ಇಲಾಖೆಗಳ ನಿರ್ದೇಶನವನ್ನು ಪಾಲಿಸಬೇಕು.
ಹೊಸ ಆದೇಶ:
ಸಾರ್ವಜನಿಕ ಗಣೇಶೋತ್ಸವಕ್ಕೆ ಸಂಬಂಸಿದಂತೆ ಮಾತ್ರ ಮಾರ್ಗಸೂಚಿ ಬದಲಾಗಿದ್ದು, ಉಳಿದ ಎಲ್ಲಾ ನಿಯಮಗಳು ಅನ್ವಯಿಸುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ 4 ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ 2 ಅಡಿ ಮೀರದಂತೆ ಪ್ರತಿಷ್ಠಾಪಿಸಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಕಡ್ಡಾಯ. ಒಂದು ವಾರ್ಡ್ ಅಥವಾ ಗ್ರಾಮಕ್ಕೆ ಒಂದೇ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಮನವಿ ಮಾಡಲಾಗಿದೆ.
ಮಾರಾಟ ಹೇಗೆ? :
ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಪ್ರತಿವರ್ಷ ಗಣೇಶ ಮೂರ್ತಿಗಳ ಮಾರಾಟ ಮಾಡಲು ಮೂರ್ತಿ ತಯಾರಕರು ಸಿದ್ದರಾಗುತ್ತಿದ್ದರು. ಆದರೆ ಈ ಬಾರಿ ಕೋವಿಡ್-19 ಸೋಂಕು ಹರಡುವಿಕೆ ಹಿನ್ನಲೆಯಲ್ಲಿ ಸರ್ಕಾರದ ಗಣೇಶೋತ್ಸವದ ಮಾರ್ಗಸೂಚಿಗಳು ಹಾಗೂ ನಗರಸಭೆಯ ಬ್ಯಾನರ್ ಪ್ರಕಟಣೆಗಳು ವ್ಯಾಪಾರಸ್ಥರಿಗೆ ಗೊಂದಲ ಮೂಡಿಸಿತ್ತು. ಮನೆಗಳಲ್ಲಿ ಸಣ್ಣ ಗಣಪನ ಮೂರ್ತಿಗಳನ್ನು ಪ್ರತಿಷ್ಟಾಪಿಸುವುದೇನೋ ಸರಿ. ಆದರೆ ಸಾರ್ವಜನಿಕವಾಗಿ ಮಾರಾಟ ಮಾಡುವುದನ್ನು ನಿಷೇಸಿದರೆ ಜನರು ಮೂರ್ತಿಗಳನ್ನು ಖರೀದಿಸುವುದು ಹೇಗೆ ಎನ್ನುವ ಪ್ರಶ್ನೆ ಎದುರಾಗಿತ್ತು.
ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡಿ
ಈ ಬಾರಿ ಸಾರ್ವಜನಿಕ ಗಣೇಶೋತ್ಸವ ನಿಷೇಧ ಮಾಡಲಾಗುವುದು ಎನ್ನುವ ಕಾರಣದಿಂದ ಮನೆಗಳಲ್ಲಿ ಪ್ರತಿಷ್ಟಾಪಿಸುವ 2 ಅಡಿಗೂ ಸಣ್ಣ ಮೂರ್ತಿಗಳನ್ನು ತಯಾರು ಮಾಡಿದ್ದೇವೆ. ಸರ್ಕಾರದ ಆದೇಶದಂತೆ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲು ಸಿದ್ದರಿದ್ದು, ನಮಗೆ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕು-ಶಿವಾನಂದ್,ಗಣಪತಿ ಮೂರ್ತಿ ತಯಾರಕರು
ನಗರಸಭೆ ಹಾಗೂ ಸಂಬಂದಿಸಿದ ಇಲಾಖೆಗಳ ಅನುಮತಿ ಕಡ್ಡಾಯ
ಸರ್ಕಾರದ ಮಾರ್ಗಸೂಚಿಯಿಂತೆ ನಗರಸಭೆ ಹಾಗೂ ಸಂಬಂದಿಸಿದ ಇಲಾಖೆಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಕೊವಿಡ್-19 ಮಾರ್ಗಸೂಚಿಗಳನ್ನು ಪಾಲಿಸಿ, ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಟಾಪಿಸಬೇಕು.ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವ ಕುರಿತು, ಸರ್ಕಾರದ ಆದೇಶ ಉಲ್ಲಂಘನೆಯಾಗದಂತೆ ಷರತ್ತುಬದ್ಧ ಅನುಮತಿ ನೀಡಲಾಗಿದೆ –ರಮೇಶ್.ಎಸ್.ಸುಣಗಾರ್,ಪೌರಾಯುಕ್ತರು, ನಗರಸಭೆ