ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅವರ ನಿರ್ದೇಶನದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸೆಪ್ಟೆಂಬರ್ 19 ರಂದು *ಮೆಗಾ ಇ-ಲೋಕ ಅದಾಲತ್* ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ನಟೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ನಿರ್ದೇಶನದಂತೆ, ಕೌಟುಂಬಿಕ ಪ್ರಕರಣ (ವಿಚ್ಛೇದನ ಪ್ರಕರಣ ಹೊರತುಪಡಿಸಿ), ಮೋಟಾರು ವಾಹನ ಅಪಘಾತ ಪರಿಹಾರ ಅರ್ಜಿ, ಕ್ರಿಮಿನಲ್ ಪ್ರಕರಣ, ಸಿವಿಲ್ ಪ್ರಕರಣ, ಹಣಕಾಸು ಸಂಸ್ಥೆಗಳ ಪ್ರಕರಣ ಸೇರಿದಂತೆ ಇತರೆ ಪ್ರಕರಣಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಇತ್ಯರ್ಥಪಡಿಸಲಾಗುವುದು.
ಸಾರ್ವಜನಿಕರು, ಮೆಗಾ ಇ-ಲೋಕ ಅದಾಲತ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ತಮಗೆ ಸಂಬಂಧಪಟ್ಟ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ನಟೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.