ಬೆಂ.ಗ್ರಾ.ಜಿಲ್ಲೆ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನಪರವಾಗಿದ್ದು, ಬಡವರ ಮನೆ ಬಾಗಿಲಿಗೆ ಆಡಳಿತ ಯಂತ್ರವನ್ನು ತರುವ ಮೂಲಕ ಅವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ ಎಂದು ಕಂದಾಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ತಿಳಿಸಿದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ರಾಜ್ಯ ಮಟ್ಟದ ವಿನೂತನ ಕಾರ್ಯಕ್ರಮದ ಎರಡನೇ ದಿನವಾದ ಇಂದು ದಲಿತ ಕಾಲೋನಿಯ ಬೀದಿಗಳಲ್ಲಿ ಸಂಚರಿಸಿ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು.ಪಿಂಚಣಿ ಸಮಸ್ಯೆ ಸ್ಥಳದಲ್ಲೇ ಬಗೆಹರಿಸಲಾಗಿದ್ದು, ಆಶ್ರಯ ಮನೆ ಯೋಜನೆಯಡಿ ಅರ್ಹರಿಗೆ ಜಾಗ ನೀಡಲು ಸೂಚಿಸಲಾಗಿದೆ ಎಂದರು.
ಹೊಸಹಳ್ಳಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಗಳ ಕಡೆ ಎಂಬ ವಿನೂತನ ಕಾರ್ಯಕ್ರಮ ಯಶಸ್ವಿಯಾಗಿದ್ದು, ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಪರಿಶ್ರಮದಿಂದಾಗಿ ಪಿಂಚಣಿ, ಪೋಡಿ, ಆಧಾರ್ ಕಾರ್ಡ್, ಪಡಿತರ ಚೀಟಿ, ಸ್ಮಶಾನದ ಒತ್ತುವರಿ ತೆರವು, ಅಂಗವಿಕಲರಿಗೆ ವಿವಿಧ ಸೌಲಭ್ಯಗಳನ್ನು ಸ್ಥಳದಲ್ಲಿಯೇ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಆರಂಭವಾದಗಿನಿಂದ ಅಂತ್ಯದವರೆಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಅವರು ಜೊತೆಯಲ್ಲಿ ಇದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದ್ದು, ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಿದ್ದಾರೆ ಎಂದರಲ್ಲದೆ, ಮುಂದಿನ ದಿನಗಳಲ್ಲಿ ಯಾರೊಬ್ಬರೂ ಅರ್ಜಿ ಹಿಡಿದು ತಾಲ್ಲೂಕು ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅಲೆಯಬಾರದು. ಬದಲಿಗೆ, ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದರು.
ಹೊಸಹಳ್ಳಿ ಗ್ರಾಮಕ್ಕೆ ಸಚಿವರು ಬಂದಿಳಿದಂದಿನಿಂದ ಇಲ್ಲಿಯವರೆಗೂ ಗ್ರಾಮಸ್ಥರು ಮನೆ ಮಗನಂತೆ ನೋಡಿಕೊಂಡಿದ್ದಾರೆ ಎಂದರು. ದಲಿತ ಕೇರಿಯ ವೆಂಕಟಲಕ್ಷ್ಮಮ್ಮ ಅವರ ಮನೆಯಲ್ಲಿ ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ, ಉಪ್ಪಿಟ್ಟು ಉಪಹಾರ ಸೇವಿಸಿದ್ದು ತುಂಬಾ ರುಚಿಕರವಾಗಿತ್ತು ಎಂದರಲ್ಲದೆ, ಯಾವುದೇ ಹೈಟೆಕ್ ಹೋಟೆಲ್ ನಲ್ಲಿಯೂ ಇಂತಹ ರುಚಿಕರವಾದ ಉಪಹಾರ ಸಿಗದು, ಅನ್ನದಾತ ಸುಖೀಭವ ಎಂದು ಅವರಿಗೆ ಧನ್ಯವಾದ ತಿಳಿಸಿದರು.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ವೆಂಕಟರಮಣಯ್ಯ, ಬೆಂಗಳೂರು ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್.ಕೆ.ನಾಯಕ, ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ಡಿವೈಎಸ್ಪಿ ರಂಗಪ್ಪ, ತಹಸೀಲ್ದಾರ್ ಟಿ.ಎಸ್.ಶಿವರಾಜ್, ಇಒ ಮುರುಡಯ್ಯ, ಪಿಡಿಒ ನಾಗರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಎನ್.ಎಸ್.ಮಹೇಶ್, ದೊಡ್ಡಬಳ್ಳಾಪುರ ಸರ್ಕಲ್ ಇನ್ಸ್‌ಪೆಕ್ಟರ್ ನವೀನ್ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶ್ವಥ್ ನಾರಾಯಣ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸಚಿವರು ಬೆಳಗಿನ ಜಾವ ಗುಂಡುಮ ಕೆರೆ ಏರಿ ವಾಯು ವಿಹಾರ ಮುಗಿಸಿ ಬಂದು, ಹೊಸಹಳ್ಳಿ ಕಾಲೋನಿಯ ವೆಂಕಟಲಕ್ಷ್ಮಮ್ಮ ಎಂಬುವವರ ಮನೆಯಲ್ಲಿ ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ, ಉಪ್ಪಿಟ್ಟು ಸೇವಿಸಿದರು.
ನಂತರ ಅವರ ಮನೆಯ ಆವರಣದಲ್ಲಿ ಹೊಸಹಳ್ಳಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಅಹವಾಲುಗಳನ್ನು ಸ್ವೀಕರಿಸಿದರು. ತದನಂತರ ಗ್ರಾಮದ ಬೀದಿಗಳಲ್ಲಿ ಸಂಚರಿಸಿ, ಗ್ರಾಮ ವೀಕ್ಷಣೆ ಮಾಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ, ಕೂ,ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….