ಬೆಂಗಳೂರು: ಭಾರತದ ಕೆಟ್ಟ ಭಾಷೆ ಯಾವುದು ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ವೆಬ್‍ಸೈಟ್ ಒಂದು ಕನ್ನಡ ಎಂಬ ಫಲಿತಾಂಶ ತೋರಿಸುತ್ತಿದ್ದದ್ದು ಕನ್ನಡಿಗರ ಸ್ವಾಭಿಮಾನದ ಕಿಚ್ಚನ್ನು ಹೊತ್ತಿಸಿತ್ತು. ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಭಿಯಾನವೇ ನಡೆದಿದ್ದು, ಸರ್ಚ್ ಇಂಜಿನ್ ಗೂಗಲ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಅತ್ಯಂತ ಕೆಟ್ಟ ಭಾಷೆ ಎಂದು ಗೂಗಲ್ ನಲ್ಲಿ ಕನ್ನಡಕ್ಕೆ ಅಪಮಾನ ಮಾಡಿದಕ್ಕೆ ಇನ್ಸ್ಟಾಗ್ರಾಂ, ಫೇಸ್ಬುಕ್ನಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಕೋಟ್ಯಂತರ ಜನರು ಮಾತನಾಡುವ ಕನ್ನಡ ಭಾಷೆಯನ್ನು ಕೊಳಕು ಭಾಷೆ ಎಂದಿರುವುದಕ್ಕೆ ಕನ್ನಡಿಗರು ರೊಚ್ಚಿಗೆದ್ದಿದ್ದು.ಆ ರೀತಿ ಪೊಸ್ಟ್ ಮಾಡಿದ ವೆಬ್ ವಿರುದ್ದ ಭಾರಿ ಪ್ರಮಾಣದಲ್ಲಿ ರಿಪೋರ್ಟ್ ಮಾಡಿದ್ದರು.
ಅಲ್ಲದೆ ಗೂಗಲ್ನಂತಹ ದೊಡ್ಡ ಸಂಸ್ಥೆ ಕನ್ನಡ ಭಾಷೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಹಾಗೂ ಈ ಕೂಡಲೇ ಪ್ರಮಾದವನ್ನು ಸರಿಪಡಿಸಬೇಕು ಎಂದು ಕನ್ನಡಿಗರು ಒತ್ತಾಯಿಸಿದ್ದರು. ಕನ್ನಡಿಗರ ಆಕ್ರೋಶದ ಜ್ವಾಲೇ ತೀವ್ರಗೊಂಡ ಬೆನ್ನಲ್ಲೆ ಗೂಗಲ್ ಆ ವೆಬ್ ಪೊಸ್ಟ್ ಅನ್ನು ಡಿಲೀಟ್ ಮಾಡಿದ್ದು, ನಂತರ ಗೂಗಲ್ ಕನ್ನಡದಲ್ಲೇ ಕನ್ನಡಿಗರ ಕ್ಷಮೆಯಾಚಿಸಿದೆ.
ಈ ಕುರಿತು ಗೂಗಲ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ಹುಡುಕುವುದು ಯಾವಾಗಲೂ ಪರಿಪೂರ್ಣವಾಗಿರುವುದಿಲ್ಲ. ಕೆಲವೊಮ್ಮೆ ಇಂಟರ್‍ನೆಟ್ ನಲ್ಲಿ ನಿರ್ದಿಷ್ಟವಾದ ಹುಡುಕಾಟಗಳಿಗೆ ಬರುವ ಫಲಿತಾಂಶಗಳು ಆಶ್ಚರ್ಯವನ್ನುಂಟು ಮಾಡುತ್ತವೆ. ಇದು ಸೂಕ್ತವಲ್ಲ ಎಂಬುದು ನಮಗೆ ಗೊತ್ತು. ಆದರೆ ಯಾವುದೇ ಒಂದು ಸಮಸ್ಯೆ ಎದುರಾದಾಗ ಮತ್ತು ನಮ್ಮ ಗಮನಕ್ಕೆ ಬಂದಾಗ ನಾವು ಕ್ಷಿಪ್ರವಾಗಿ ಸಮರ್ಪಕ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ಅಲ್ಗೊರಿಧಂ ಅನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲವಾಗಿರುವುದನ್ನು ಮುಂದುವರಿಸಿದ್ದೇವೆ. ತಪ್ಪು ಅರ್ಥ ಬಂದಿರುವುದಕ್ಕೆ ಮತ್ತು ಯಾವುದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….