“ನಾನು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ” ಇದು ಕಳೆದ 2014 ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಆಡಿದ ಮಾತು.
ಜಾತ್ಯಾತೀತ ಎಂಬ ಹಣೆಪಟ್ಟಿ ಹಚ್ಚಿ ರಾಜಕಾರಣ ಮಾಡುತ್ತಿರುವ ದೇವೇಗೌಡರ ಅಥವಾ ಅವರ ಪುತ್ರ ಕುಮಾರಸ್ವಾಮಿಯವರ ಮುಸ್ಲಿಂ ಸಮುದಾಯವನ್ನು ಮೆಚ್ಚಿಸಲು ನೀಡಿದ ಹೇಳಿಕೆಗಳು ಒಂದೆರಡೇನಲ್ಲ. ಇವರಿಬ್ಬರೂ ಸಿದ್ಧರಾಮಯ್ಯನವರ ಜೊತೆಗೆ ಯಾವಾಗಲೂ ಓಲೈಕೆಯ ಪೈಪೋಟಿ ನಡೆಸುತ್ತಲೇ ಇರುತ್ತಾರೆ.
ಕುಮಾರಸ್ವಾಮಿಯವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ಕೇಂದ್ರ ವಾಯುಪಡೆಯು ಪಾಕಿಸ್ತಾನದ ಉಗ್ರರ ವಿರುದ್ಧ ಏರ್‌ಸ್ಟ್ರೈಕ್ ಕಾರ್ಯಾಚರಣೆ ನಡೆಸಿದಾಗ ರಾಜ್ಯದ ಜನತೆಗೆ “ಸಂಭ್ರಮಿಸಬೇಡಿ, ಒಂದು ಸಮುದಾಯಕ್ಕೆ ನೋವಾಗುತ್ತದೆ” ಎಂಬುದಾಗಿ ಹೇಳಿಕೆ ನೀಡಿ ತಮ್ಮ “ದೇಶಭಕ್ತಿ”ಯನ್ನು ಮೆರೆದಿದ್ದರು. ಅಷ್ಟರ ಮಟ್ಟಿಗೆ ದೇವೇಗೌಡರ ಕುಟುಂಬ ಮುಸ್ಲಿಮರ ಪರ ನಾವು ಎಂದು ಸಾರಲು ಪ್ರಯತ್ನ ನಡೆಸುತ್ತಲೇ ಇದ್ದರು.
ಇಂತಿಪ್ಪ ಈ ‘ಜಾತ್ಯಾತೀತ’ ಪಕ್ಷದಲ್ಲಿ ಬಹುಕಾಲದಿಂದ ಕಿತ್ತರೂ ಬರದಂತೆ ಕುಮಾರಸ್ವಾಮಿಯವರ ಬಲಗೈ ಭಂಟನಾಗಿದ್ದ ಜಮೀರ್ ಅಹಮದ್ ಖಾನ್ ಅವರು 2018 ರಲ್ಲಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ನಂತರ ಗುರು-ಶಿಷ್ಯರ ವಾಗ್ಯುದ್ಧಗಳು ಇವತ್ತಿಗೂ ಏರುಗತಿಯಲ್ಲಿಯೇ ಸಾಗುತ್ತಿವೆ. .
ಇದು ಮಿತಿಮೀರಿ ಜಮೀರ್ ಪದೇ ಪದೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಏಕವಚನದಲ್ಲಿ ಕೀಳುಮಟ್ಟದ ಪದಪ್ರಯೋಗ ಮಾಡಿ ನಿಂದಿಸುತ್ತಿದ್ದಾರೆ.. ಈ ಹಿಂದೆ ಜಮೀರ್ ನ ಕಮ್ಯುನಲ್ ವರ್ಚಸ್ಸಿನಿಂದ ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿದ್ದದ್ದು ಸತ್ಯ. ಆತನ ಸಮುದಾಯದ ಮೆಚ್ಚಿಸಲು ಬಿಳಿ ಟೋಪಿ ಹಾಕಿಕೊಂಡು ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಮಸೀದಿಗಳಿಗೆ ನಿರಂತರವಾಗಿ ಎಡತಾಕಿದ್ದರು. ಯಥಾ ಪ್ರಕಾರ ದೇವೇಗೌಡರು ಸೆಂಟಿಮೆಂಟ್ ಸಂಭಾಷಣೆಗಳ ಮೂಲಕ ಸಮುದಾಯದ ಮತಬ್ಯಾಂಕ್ ಮೇಲೆ ಸ್ವಲ್ಪ ಹಿಡಿತ ಸಾಧಿಸಿದ್ದರು. ಆದರೆ ಆ ಹಿಡಿತವೆಲ್ಲಾ ಜಮೀರನ ಜೊತೆಯೇ ಕಾಂಗ್ರೆಸ್ ಪಾಲಾಗಿಬಿಟ್ಟಿದೆ. ಜೆಡಿಎಸ್ ಗೆ ಎಲ್ಲೆಲ್ಲಿ ಮುಸ್ಲಿಂ ಸಮುದಾಯದ ಬೆಂಬಲ ಜಾಸ್ತಿ ಇತ್ತೋ ಅಲ್ಲೆಲ್ಲಾ ಜಮೀರ್ ಕತ್ತರಿ ಆಡಿಸಿ ಯಶಸ್ವಿಯೂ ಆಗಿದ್ದಾರೆ.
ಇಷ್ಟಾದರೂ ಮುಸ್ಲಿಂ ತುಷ್ಟೀಕರಣವನ್ನು ಗೌಡರ ಕುಟುಂಬ ಬಿಡುತ್ತಾ ಅನ್ನೋದೇ ಯಕ್ಷಪ್ರಶ್ನೆ. ದೇವೇಗೌಡರು ನೋಡಿದ್ರೆ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ತೀನಿ, ಈ ರಾಷ್ಟ್ರವನ್ನು ಹಿಂದೂರಾಷ್ಟ್ರ ಆಗೋಕೆ ಬಿಡಲ್ಲ ಅಂತಾರೆ. ಕುಮಾರಣ್ಣ ನೂ ಅದೇ ರೀತಿಯ ಓಲೈಕೆಯ ಹೇಳಿಕೆಗಳನ್ನು ಕೊಡ್ತಾರೆ. ಅಷ್ಟಕ್ಕೂ ಮುಸ್ಲಿಮರು ನಿಜವಾಗಿಯೂ ಮುಸ್ಲಿಮೇತರ ಪಕ್ಷಗಳ ಬಗ್ಗೆ ಒಲವು ಹೊಂದಿದ್ದಾರಾ!?
ಇದರ ಬಗ್ಗೆ ಸಣ್ಣ ವಿಶ್ಲೇಷಣೆ ನೋಡಿ..ಮುಸ್ಲಿಂ ಮತದಾರರಿಗೆ ಭಾರತದಲ್ಲಿ ತಮ್ಮ ಧರ್ಮಾಧಾರಿತ ಪಕ್ಷಗಳ ಮೇಲೆ ಸಹಜವಾಗಿಯೇ ಒಲವು. ಅವರ ಮೊದಲ ಪ್ರಾಶಸ್ತ್ಯ ಇಸ್ಲಾಂ ಹೆಸರಿನ ರಾಜಕೀಯ ಪಕ್ಷಗಳಿಗೇ.. ಎರಡನೇ ಆಯ್ಕೆ ಬಂದು ಕಾಂಗ್ರೆಸ್ ಪಕ್ಷ.
ಮೂರನೇ ಆಯ್ಕೆ ಬಂದು ಆಯಾ ರಾಜ್ಯಗಳಿಗನುಗುಣವಾಗಿ ಪ್ರಾದೇಶಿಕ ಪಕ್ಷಗಳಿಗೆ. ಕರ್ನಾಟಕವನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ನಮ್ಮ ರಾಜ್ಯದ ಕರಾವಳಿ ಭಾಗದಲ್ಲಿ ಎಸ್‌ಡಿಪಿಐ ಪಕ್ಷ ಸ್ಪರ್ಧಿಸಿದ ಕ್ಷೇತ್ರದಲ್ಲಿ ಮುಸ್ಲಿಮ್ ಸನುದಾಯಕ್ಕೆ ಕಾಂಗ್ರೆಸ್ ಎರಡನೇ ಆಯ್ಕೆಯಾಗಿರುತ್ತದೆ. ಅಲ್ಲಿ ಕಾಂಗ್ರೆಸ್ ಗೆಲ್ಲುವುದು ಕಷ್ಟಸಾಧ್ಯ. ಇನ್ನೂ ಜೆಡಿಎಸ್ ಗೆ ಮುಸ್ಲಿಮರು ಮತ ಹಾಕುವುದು ತೀರಾ ಕಷ್ಟಸಾಧ್ಯದ ಮಾತು. ಬಿಜೆಪಿ ಬಗ್ಗೆ ಮುಸ್ಲಿಮರ ನಿಲುವು ಹೇಳಲೇಬೇಕಿಲ್ಲ ಬಿಡಿ. ಇನ್ನು ಎಸ್‌ಡಿಪಿಐ ಇಲ್ಲದ ಮತಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದ ಮೊದಲ ಪ್ರಾಶಸ್ತ್ಯ ಕಾಂಗ್ರೆಸ್. ಅಕಸ್ಮಾತ್ ಕಾಂಗ್ರೆಸ್ ಪಕ್ಷ ಅನ್ಯ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಜೆಡಿಎಸ್ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗ ನೇರಾನೇರ-ಮುಖಾಮುಖಿ ಪೈಪೋಟಿ ಏರ್ಪಡಬಹುದು. ಇಲ್ಲವಾದರೆ ಜೆಡಿಎಸ್ ಪಾಲಿಗೆ ಮುಸ್ಲಿಂ ಮತಗಳು ಮರೀಚಿಕೆಯಾಗುತ್ತವೆ.
ಯಾವ ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಮುಸ್ಲಿಂ ಸಮುದಾಯದ ಶೇಕಡಾ ಒಂದೆರಡರಷ್ಟು ಮತ ಬಂದರೂ ಅದು ಶತಮಾನದ ಪವಾಡ ಎನಿಸುತ್ತದೆ. ಅಲ್ಲಿಗೆ ಒಂದು ಸತ್ಯಾಂಶವನ್ನು ನಾವು ಗಮನಿಸಬಹುದು. ಎಸ್‌ಡಿಪಿಐ ಇಲ್ಲವಾದರೆ ಮುಸ್ಲಿಂ ಸಮುದಾಯದ ಬಹುತೇಕ ಮತಗಳು ಕಾಂಗ್ರೆಸ್ ತೆಕ್ಕೆಗೆ ಕ್ರೋಢೀಕರಣಗೊಳ್ಳುತ್ತವೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕಾಗುವ ಲಾಭಕ್ಕಿಂತ, ಬಿಜೆಪಿಗೆ ಆಗುವ ನಷ್ಟವೇ ಹೆಚ್ಚು. ಜೆಡಿಎಸ್ ಈ ವಿಚಾರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ.
ಈ ಕಾರಣದಿಂದಲೇ ಏನೋ ರಾಜಕೀಯ ಲೆಕ್ಕಾಚಾರಗಳ ಆಧಾರದ ಮೇಲೆ ಪಕ್ಷದ ಭವಿಷ್ಯದ ದೃಷ್ಟಿಯಿಂದ ರಾಜ್ಯ ಬಿಜೆಪಿ ಸರ್ಕಾರ ಸಹ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಒತ್ತಾಯ,ಒತ್ತಡಗಳ ಹೊರತಾಗಿಯೂ ಎಸ್‌ಡಿಪಿಐ ಪಕ್ಷ/ಸಂಘಟನೆಯನ್ನು ನಿಷೇಧಿಸುವ ಗೋಜಿಗೇ ಹೋಗಿಲ್ಲ. ಅಲ್ಪಸಂಖ್ಯಾತರ
ತುಷ್ಟೀಕರಣದ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ(ಬಿಜೆಪಿ ಸ್ವಲ್ಪ ಮಟ್ಟಿಗೆ) ಸಹ ತಕ್ಕಡಿಯಲ್ಲಿ ಸಮನಾಗಿ ತೂಗುತ್ತವೆ ಎಂಬುದು ಬೆತ್ತಲೆಯಾಗಿರುವ ಸತ್ಯ. ಈ ‘ತುಷ್ಟೀಕರಣ’ ಎಂಬ ಬೆತ್ತಲೆ ಸತ್ಯಕ್ಕೆ ‘ಜಾತ್ಯಾತೀತತೆ’ ಎಂಬ ಸುಳ್ಳಿನ ಸೆರಗನ್ನು ಮುಚ್ಚಿ ರಾಜಕಾರಣ ನಡೆಯುತ್ತದಷ್ಟೇ @ಜಿ.ಎನ್.ಪ್ರದೀಪ್
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….