ಬಾಗಲಕೋಟೆ: ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರ ಮಾದರಿಯಾಗಿ ಪರಿಣಮಿಸಿದ್ದು, ಇದಕ್ಕೆ ಶ್ರಮಿಸಿದ ಕರೊನಾ ವಾರಿಯರ್ಸ್ ಗಳ ಕಾರ್ಯವನ್ನು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಶ್ಲಾಘಿಸಿದರು.
ಬೀಳಗಿ ತಾಲೂಕಿನ ಕಜ್ಜಿಡೋಣಿ ಗ್ರಾಮ ಪಂಚಾಯತ ಆವರಣದಲ್ಲಿ ಹಮ್ಮಿಕೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೋವಿಡ್ ಮೊದಲನೇ ಹಾಗೂ ಎರಡನೇ ಅಲೆಯ ನಿಯಂತ್ರಣದಲ್ಲಿ ತಾಲೂಕಾ ಅಧಿಕಾರಿಗಳು, ವೈದ್ಯರು ಹಾಗೂ ಇತರೆ ಕರೊನಾ ವಾರಿಯರ್ಸ್ ಶ್ರಮದಿಂದ ಕರೊನಾ ಮುಕ್ತ ತಾಲೂಕಾಗಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕೋವಿಡ್ ನಿಯಂತ್ರಣದಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಕೈಗೊಂಡಿದ್ದರಿಂದ ಜಿಲ್ಲೆಯ ಎಲ್ಲ ತಾಲೂಕುಗಳಿಗಿಂತ ಪಾಜಿಟಿವಿಟಿ ಪ್ರಮಾಣ ಕಡಿಮೆ ಇದ್ದು, ಈಗ ಸೊನ್ನೆಗೆ ಬಂದಿದೆ. ಕರೊನಾದಿಂದ ಜನ ಪಾಠ ಕಲಿತಿದ್ದು, ಕೋವಿಡ್ ಲಸಿಕೆಯಿಂದಾಗುವ ಪ್ರಯೋಜನವನ್ನು ಅರಿತಿದ್ದು, ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಜನ ಮುಂದೆ ಬರುತ್ತಿದ್ದಾರೆ. ಅದೇ ರೀತಿ ಬರುವ 3ನೇ ಅಲೆಯನ್ನು ಸಹ ಎದುರಿಸಲು ಸಜ್ಜಾಗುವದರ ಜೊತೆ ಮಕ್ಕಳ ಬಗ್ಗೆ ಜಾಗೃತಿ ವಹಿಸಲು ತಿಳಿಸಿದರು. ನಂತರ ಗ್ರಾಮದ ಜನರ ಕುಂದು ಕೊರತೆಗಳನ್ನು ಆಲಿಸಿದರು.
ಸಭೆಯಲ್ಲಿ ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಸೇರಿದಂತೆ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾ.ಪಂ ಪಿಡಿಓ, ಗ್ರಾ.ಪಂ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ನಂತರ ಚಿಕ್ಕಶೆಲ್ಲಿಕೇರಿ, ತುಳಸಿಗೇರಿ, ದೇವನಾಳ, ಛಬ್ಬಿ ಹಾಗೂ ಯಡಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು. ಅಲ್ಲದೇ ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..