ನವದೆಹಲಿ: ಫಾಸ್ಪೇಟ್ ಯುಕ್ತ ಅಥವಾ ಫಾಸ್ಫಾಟಿಕ್ ರಸಗೊಬ್ಬರಗಳ (ಡಿಎಪಿ ಮತ್ತು ಎನ್‌ಪಿಕೆ) ಲಭ್ಯತೆಯನ್ನು ಸುಧಾರಿಸುವ ಸಲುವಾಗಿ ಮತ್ತು ರಸಗೊಬ್ಬರಗಳಲ್ಲಿ ಭಾರತವನ್ನು ನೈಜವಾಗಿ ಸ್ವಾವಲಂಬಿ ಮಾಡುವ ಮೂಲಕ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ರಸಗೊಬ್ಬರ ಕೈಗಾರಿಕೆಗಳ ಮಧ್ಯಸ್ಥಗಾರೊಂದಿಗೆ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಹಾಯಕ ಸಚಿವ ಮನ್ಸುಖ್ ಮಾಂಡವಿಯಾ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಂಡವಿಯಾ ಅವರು, “ಡಿಎಪಿ ಮತ್ತು ಎನ್‌ಪಿಕೆ ರಸಗೊಬ್ಬರಗಳ ಪ್ರಮುಖ ಕಚ್ಚಾ ವಸ್ತುವಾದ ರಾಕ್ ಫಾಸ್ಫೇಟ್‌ನಲ್ಲಿ ಭಾರತವನ್ನು ಸ್ವಾವಲಂಬಿ ಮಾಡಲು ರಸಗೊಬ್ಬರ ಇಲಾಖೆ ಕ್ರಿಯಾ ಯೋಜನೆಯೊಂದಿಗೆ ಸಿದ್ಧವಾಗಿರುವುದು ನನಗೆ ಸಂತಸ ತಂದಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಮೊಳಗಿಸಿದ ‘ಆತ್ಮನಿರ್ಭರ ಭಾರತ್’ ಕರೆಯನ್ನುಅನುಸರಿಸುವ ಮೂಲಕ, ಭಾರತ ಮುಂದಿನ ದಿನಗಳಲ್ಲಿ ರಸಗೊಬ್ಬರಗಳಲ್ಲಿ ಸ್ವಾವಲಂಬನೆ ಸಾಧಿಸುವತ್ತ ದಿಟ್ಟ ಹೆಜ್ಜೆ ಇಡುತ್ತಿದೆ,ʼʼ ಎಂದರು.
ಸ್ಥಳೀಯ ಸಂಪನ್ಮೂಲಗಳ ಬಳಕೆ ಮೂಲಕ ರಸಗೊಬ್ಬರ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸಲು ಕ್ರಿಯಾ ಯೋಜನೆಯನ್ನು ರೂಪಿಸಲಾಯಿತು. ರಾಜಸ್ಥಾನ, ದಕ್ಷಿಣ ಭಾರತದ ಮಧ್ಯಭಾಗ, ಹಿರಾಪುರ (ಮಧ್ಯ ಪ್ರದೇಶ), ಲಲಿತ್‌ಪುರ (ಉ.ಪ್ರದೇಶ), ಮುಸ್ಸೂರಿ ಶಿಲಾಪದರ, ಕಡಪ ಅಚ್ಚುಕಟ್ಟು ಪ್ರದೇಶದಲ್ಲಿ (ಆಂಧ್ರ ಪ್ರದೇಶ) ಲಭ್ಯವಿರುವ ಫಾಸ್ಪೋರೈಟ್ ನಿಕ್ಷೇಪಗಳನ್ನು ವಾಣಿಜ್ಯ ಉದ್ದೇಶದಿಂದ ಮತ್ತಷ್ಟು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸದ್ಯ ಭಾರತದಲ್ಲಿರುವ 30 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಂಡವಿಯಾ ನಿರ್ದೇಶನ ನೀಡಿದರು.
ರಾಜಸ್ಥಾನದ ಸತಿಪುರ, ಭರುಸಾರಿ ಮತ್ತು ಲಖಾಸರ್ ಹಾಗೂ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಇರಬಹುದಾದ ಪೊಟ್ಯಾಸಿಕ್ ಅದಿರಿನ ಸಂಪನ್ಮೂಲಗಳ ಶೋಧನೆಯನ್ನು ತ್ವರಿತಗೊಳಿಸಲು ಸಲುವಾಗಿ ಭಾರತದ ಗಣಿಗಾರಿಕೆ ಮತ್ತು ಭೂವೈಜ್ಞಾನಿಕ ಸಮೀಕ್ಷೆ ಇಲಾಖೆಯೊಂದಿಗೆ ಚರ್ಚೆ ಮತ್ತು ಯೋಜನೆ ನಡೆಸಲಾಗುತ್ತಿದೆ. ಸಂಭಾವ್ಯ ನಿಕ್ಷೇಪಗಳ ಗಣಿಗಾರಿಕೆಯನ್ನು ಆದಷ್ಟು ಬೇಗ ಪ್ರಾರಂಭಿಸಲು ಎಲ್ಲಾ ಇಲಾಖೆಗಳು ಜಂಟಿಯಾಗಿ ಕೆಲಸ ಮಾಡುತ್ತಿವೆ. ವಿದೇಶದಿಂದ ದುಬಾರಿ ಕಚ್ಚಾವಸ್ತುವಿನ ಆಮದು ಕಡಿಮೆ ಮಾಡಲು ಆ ಮೂಲಕ ಕೈಗೆಟುಕುವ ದರದಲ್ಲಿ ಎಲ್ಲ ರೈತರಿಗೂ ರಸಗೊಬ್ಬರ ಲಭ್ಯವಾಗುವಂತೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳೂ ಸಹ ಕ್ರಿಯಾ ಯೋಜನೆಯಲ್ಲಿ ಸೇರಿವೆ.
ಡಿಎಪಿ ಮತ್ತು ಎನ್‌ಪಿಕೆ ರಸಗೊಬ್ಬರಗಳಿಗೆ ರಾಕ್ ಫಾಸ್ಫೇಟ್ ಪ್ರಮುಖ ಕಚ್ಚಾ ವಸ್ತುವಾಗಿದೆ. ಪ್ರಸ್ತುತ ಭಾರತವು ಇದಕ್ಕಾಗಿ 90% ಆಮದನ್ನು ಅವಲಂಬಿಸಿದೆ. ಅಂತಾರಾಷ್ಟ್ರೀಯ ಬೆಲೆಗಳಲ್ಲಿನ ಏರಿಳಿತವು ಗೊಬ್ಬರಗಳ ದೇಶೀಯ ಬೆಲೆಗಳ ಮೇಲೆ ಪರಿಣಾಮ ಬೀರುತ್ತವೆ ಹಾಗೂ ದೇಶದ ಕೃಷಿ ಕ್ಷೇತ್ರದ ಪ್ರಗತಿ ಮತ್ತು ಅಭಿವೃದ್ಧಿಗೆ ಇದರಿಂದ ಅಡ್ಡಿಯಾಗುತ್ತದೆ. ಆದ್ದರಿಂದ, ಭಾರತದಲ್ಲಿ ಲಭ್ಯವಿರುವ ರಾಕ್ ಫಾಸ್ಫೇಟ್ ನಿಕ್ಷೇಪಗಳ ಶೋಧನೆ ಮತ್ತು ಗಣಿಗಾರಿಕೆಯನ್ನು ತ್ವರಿತಗೊಳಿಸಲು ಮಂಡವಿಯಾ ಮಧ್ಯಸ್ಥಗಾರರೊಂದಿಗೆ ಸಭೆ ನಡೆಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..