ನವದೆಹಲಿ: ಆತ್ಮ ನಿರ್ಭರ್ ಭಾರತ್ ರೋಜ್ ಗಾರ್ ಯೋಜನೆಯಡಿ [ಎ.ಬಿ.ಆರ್.ವೈ] ಲಾಭ ಪಡೆಯಲು ಫಲಾನುಭವಿಗಳು ನೋಂದಣಿ ಮಾಡಿಕೊಳ್ಳುವ ಅಂತಿಮ ದಿನಾಂಕವನ್ನು 2021 ರ ಜೂನ್ 30 ರಿಂದ 2022 ರ ಮಾರ್ಚ್ 31 ರ ವರೆಗೆ 9 ತಿಂಗಳು ವಿಸ್ತರಣೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಹಿಂದೆ ಈ ಯೋಜನೆಯಡಿ 58.5 ಲಕ್ಷ ಔಪಚಾರಿಕ ವಲಯದಲ್ಲಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿತ್ತು. ಇದೀಗ ವಿಸ್ತರಣೆಯಿಂದಾಗಿ ಈ ಪ್ರಮಾಣ 71.8 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. 18.06.2021 ರಂತೆ ಎ.ಬಿ.ಆರ್.ವೈನಡಿ 79,577 ಸಂಸ್ಥೆಗಳ ಮೂಲಕ 21.42 ಲಕ್ಷ ಫಲಾನುಭವಿಗಳಿಗೆ 902 ಕೋಟಿ ರೂಪಾಯಿ ಸೌಲಭ್ಯ ದೊರಕಿಸಿಕೊಡಲಾಗಿದೆ.
31.03.2020 ರ ವರೆಗಿನ ನೋಂದಣಿಯ ವಿಸ್ತೃತ ಅವಧಿಯ ವೆಚ್ಚ ಸೇರಿದಂತೆ ಯೋಜನೆಯ ಒಟ್ಟು ಅಂದಾಜು ವೆಚ್ಚ 22,098 ಕೋಟಿ ರೂಪಾಯಿ ಆಗಿದೆ.
ಈ ಕಾರ್ಯಕ್ರಮವನ್ನು ಕಾರ್ಮಿಕರ ಭವಿಷ್ಯನಿಧಿ ಸಂಘಟನೆ [ಇಪಿಎಫ್ಓ] ಯಡಿ ಜಾರಿಗೊಳಿಸುತ್ತಿದ್ದು, ವಿವಿಧ ವಲಯಗಳು/ ಕೈಗಾರಿಕೆಗಳಲ್ಲಿ ಆರ್ಥಿಕ ಹೊರೆಯನ್ನು ತಗ್ಗಿಸುವ ಮತ್ತು ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಲಾಗಿದೆ.
ಎ.ಬಿ.ಆರ್.ವೈ ನಡಿ ಇ.ಪಿ.ಎಫ್.ಒಗೆ ನೋಂದಾಯಿಸಲಾದ ಸಂಸ್ಥೆಗಳು ಮತ್ತು ಅವರ ಹೊಸ ಉದ್ಯೋಗಿಗಳು 15,000 ಕ್ಕಿಂತ ಕಡಿಮೆ ವೇತನ ಪಡೆಯುತ್ತಿದ್ದರೆ ಅಥವಾ ಸಂಸ್ಥೆಗಳಿಗೆ ಹೊಸದಾಗಿ ನೇಮಕಮಾಡಿಕೊಂಡರೆ ಇಲ್ಲವೆ 01.03.2020 ರಿಂದ 30.09.2020 ಅವಧಿಯಲ್ಲಿ ಕೆಲಸ ಕಳೆದುಕೊಂಡಿದ್ದರೆ ಅಂತಹವರಿಗೆ ಇದರಿಂದ ಲಾಭವಾಗಲಿದೆ.
ಎ.ಬಿ.ಆರ್.ವೈ ನಡಿ ಇ.ಪಿ.ಎಫ್.ಒಗೆ ನೋಂದಾಯಿತ ಸಂಸ್ಥೆಗಳ ಬಲವನ್ನು ಅವಲಂಬಿಸಿ ನೌಕರರು ಮತ್ತು ಉದ್ಯೋಗದಾತರು ಹಂಚಿಕೆ [ಶೇ 24 ರಷ್ಟು] ಅಥವಾ ನೌಕರರ ಪಾಲನ್ನು [ಶೇ 12 ರಷ್ಟು ವೇತನ] ಎರಡು ವರ್ಷಗಳ ಕಾಲ ಭಾರತ ಸರ್ಕಾರ ಒದಗಿಸಲಿದೆ.
ಎ.ಬಿ.ಆರ್.ವೈ ನಡಿ ಕೋರೋನೋತ್ತರದ ಚೇತರಿಕೆ ಹಂತದಲ್ಲಿ ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಔಪಚಾರಿಕ ವಲಯದಲ್ಲಿ ಉದ್ಯೋಗ ಸೃಜನೆಯನ್ನು ಹೆಚ್ಚಿಸಲು ಆತ್ಮ ನಿರ್ಭರ್ 3.0 ಪ್ಯಾಕೇಜ್ ಘೋಷಿಸಲಾಗಿದೆ. ಈ ಯೋಜನೆ ದೇಶದಲ್ಲಿ ಕೋವಿಡ್ – 19 ಸಾಂಕ್ರಾಮಿಕದ ಪರಿಣಾಮವನ್ನು ತಗ್ಗಿಸಲಿದೆ ಮತ್ತು ಕಡಿಮೆ ವೇತನ ಪಡೆಯುತ್ತಿರುವ ಕಾರ್ಮಿಕರ ಬವಣೆಗಳನ್ನು ನಿವಾರಿಸುತ್ತದೆ, ವ್ಯಾಪಾರ ಚಟುವಟಿಕೆಗಳನ್ನು ಪುನರಾರಂಭಿಸಲು ಮತ್ತು ವಿಸ್ತರಿಸಲು ಉದ್ಯೋಗದಾತರಿಗೆ ಪ್ರೋತ್ಸಾಹ ನೀಡುತ್ತದೆ. (ಸಂಗ್ರಹ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..