ಬೆಂ.ಗ್ರಾ.ಜಿಲ್ಲೆ: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಿಂದ ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಉದ್ದೇಶಿಸಿರುವ ಬೈರಗೊಂಡಲು ಜಲಾಶಯದ ನಿರ್ಮಾಣಕ್ಕಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಆಯ್ದ ಕೆಲವು ಗ್ರಾಮಗಳಲ್ಲಿ ಸರ್ವೇ ಕಾರ್ಯ ಮತ್ತು ಜಿಯೋಟೆಕ್ನಿಕಲ್ ತನಿಖೆ ಮಾಡಲು ಸ್ಥಳೀಯ ಜನರು ಅಡ್ಡಿಪಡಿಸದೆ ಸಹಕಾರ ನೀಡಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿ, ಗರಡುಗಲ್ಲು, ಮಚ್ಚೇನಹಳ್ಳಿ, ಶೀರಾಮನಹಳ್ಳಿ, ಶಿಂಗೇನಹಳ್ಳಿ, ಗಾಣದಾಳು, ಕಣಕೇನಹಳ್ಳಿ, ನರಸಾಪುರ, ಆಲಪ್ಪನಹಳ್ಳಿ, ಬೈಯಪ್ಪನಹಳ್ಳಿ ಮತ್ತು ಅಂಕೋನಹಳ್ಳಿ
ಗ್ರಾಮಗಳಲ್ಲಿ ಜಲಾಶಯ ಮುಳುಗಡೆಯ ಸಾಧಕ ಬಾಧಕಗಳ ಸರ್ವೇ ಸಮೀಕ್ಷೆ ಕಾರ್ಯ ಮಾಡಲು ಸರ್ಕಾರದಿಂದ ನಿರ್ದೇಶನವಿರುವುದರಿಂದ, ಸರ್ವೇ ಕಾರ್ಯ ಮತ್ತು ಜಿಯೋಟೆಕ್ನಿಕಲ್ ತನಿಖೆ ಮಾಡಲು ಸ್ಥಳೀಯರ ಸಹಕಾರ ಅವಶ್ಯವಾಗಿದೆ.
ಜಲಾಶಯದ ಸರ್ವೇ ಕಾರ್ಯ ಮಾಡಿದ್ದಲ್ಲಿ, ಮಾತ್ರ ಜಲಾಶಯದ ಮುಳುಗಡೆ ಪ್ರದೇಶದ ನಿಖರವಾಗಿ ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ, ಭೂಪರಿಹಾರ ಮೊತ್ತ, ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಅಂದಾಜು ಲೆಕ್ಕಚಾರ ಮಾಡಲಾಗುವುದು.
ಜಲಾಶಯದ ಸಾಧಕ ಬಾಧಕಗಳ ಸರ್ವೇ ಸಮೀಕ್ಷೆ ಕಾರ್ಯದಿಂದ ಭೂಮಿಗಾಗಲಿ ಅಥವಾ ವೈಯಕ್ತಿಕ ದಿನ ನಿತ್ಯ ಕೆಲಸ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..