ದೊಡ್ಡಬಳ್ಳಾಪುರ: ಈಗಿನ ಸರ್ಕಾರದಲ್ಲಿ ಗಂಗಾ ಕಲ್ಯಾಣ, ಕಣದ ಮೈದಾನ ಮೊದಲಾದ ರೈತರ ಹಾಗೂ ಕೂಲಿ ಕಾರ್ಮಿಕರ ಯೋಜನೆಗಳು ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿವೆ. ತಾಲೂಕಿನಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಆಗಿರುವ ವಸತಿ ಯೋಜನೆಗಳನ್ನು ಈಗಿನ ಬಿಜೆಪಿ ಸರ್ಕಾರ ತಮ್ಮ ಯೋಜನೆಗಳೆಂದು ಹೇಳಿಕೊಳ್ಳುತ್ತಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದ್ದಾರೆ.
ನಗರದ ತಾಲೂಕು ಪಂಚಾಯಿತಿ ಸಮೀಪ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿ, ನೀಡಲಾದ ಪಂಪ್ ಸೆಟ್, ಮೋಟಾರು ಪರಿಕರಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.
2013ರಿಂದ 18ರವರೆಗಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ತಾಲೂಕಿಗೆ 75ರಿಂದ 100 ಕೊಳವೆ ಬಾವಿಗಳನ್ನು ಕೊರೆಸಿ, ಗಂಗಾ ಕಲ್ಯಾಣ ಯೋಜನೆಯಡಿ ಪಂಪ್ ಸೆಟ್, ಮೋಟಾರು ಪರಿಕರಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿತ್ತು. ಆದರೆ ಮೂರು ವರ್ಷಗಳಿಂದ ಈ ಯೋಜನೆಗಳು ಮಾಯವಾಗಿದ್ದು, ಬರೀ ಆಶ್ವಾಸನೆಗಳು ಮಾತ್ರ ದೊರೆಯುತ್ತಿವೆ ಎಂದರು.
ವಸತಿ ಯೋಜನೆಯಡಿ ತಾಲೂಕಿನಲ್ಲಿ 32 ಸಾವಿರ ಮನೆಗಳು ಮಂಜೂರಾಗಿದ್ದು, ಯೋಜನೆಗಳು ಪೂರ್ಣವಾಗಿಲ್ಲ. ಮನೆ ನಿರ್ಮಾಣಕ್ಕೆ ಹಣ ಕಟ್ಟಿರುವವರಿಗೂ ಮುಂದಿನ ಹಂತಕ್ಕೆ ಮಂಜೂರಾಗಬೇಕಿದ್ದ ಹಣ ಬಾಕಿಇವೆ. ತಾಲೂಕಿನ ಸೊಣಪನ ಹಳ್ಲಿ, ಶಿವಪುರ, ಹಾದ್ರಿಪುರದ ವಸತಿ ಯೋಜನೆಗಳು ಹಿಂದಿನ ಸರ್ಕಾರದಲ್ಲಾಗಿದ್ದು, ಈಗ ಹೊಸದಾಗಿ ಯೋಜನೆಯ ವಿವರಗಳನ್ನು ಕಳುಹಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ 2018-19ನೇ ಸಾಲಿನ ಗಂಗಾಕಲ್ಯಾಣ ಯೋಜನೆಯಡಿ 10 ಫಲಾನುಭವಿಗಳಿಗೆ ಪಂಪ್ ಸೆಟ್, ಮೋಟಾರು ಪರಿಕರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗಂಗಾಕಲ್ಯಾಣ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ರಂಗನಾಥ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣ ಗೌಡ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಟಿಎಪಿಎಂಸಿಎಸ್ ನಿರ್ದೇಶಕ ಗೋವಿಂದರಾಜು, ಮುಖಂಡರಾದ ಸೋಮರುದ್ರ ಶರ್ಮ,ಆಂಜನ ಮೂರ್ತಿ, ಹೇಮಂತರಾಜು ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..