ಬೆಂ.ಗ್ರಾ.ಜಿಲ್ಲೆ: ಅರ್ಕಾವತಿ ನದಿ ಕಾಲುವೆ (ಹಳ್ಳ) ಒತ್ತುವರಿ ಹಾಗೂ ಚನ್ನಾಪುರ ಗ್ರಾಮದ ಸರ್ವೆ ನಂಬರ್: 30 ಮತ್ತು 78 ರಲ್ಲಿನ ಸರ್ಕಾರಿ ಹಳ್ಳ (ಸರ್ಕಾರಿ ಕಾಲುವ) ಗಳನ್ನು ಮುಚ್ಚಿ ಕೃಷಿ ಭೂಮಿ ಹಾಗೂ ಸರ್ಕಾರಿ ಫಡ (ಗೋಮಾಳ) ಜಮೀನಿನಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಯುವ ಜನತಾದಳದವತಿಯಿಂದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ದೂರು ನೀಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಸಾಮಾಜಿಕ ಹೋರಾಟಗಾರ ಜಿ.ಮಂಜೇಶ್, ದೊಡ್ಡಬಳ್ಳಾಪುರ ತಾಲ್ಲೂಕು, ತೂಬಗೆರೆ ಹೋಬಳಿಯ, ಚನ್ನಾಪುರ ಗ್ರಾಮದ ಸರ್ವೆ ನಂಬರ್ 30 ಮತ್ತು ಸರ್ವೆ ನಂಬರ್: 78ರಲ್ಲಿ AURAFOOTHILLS” ಎಂಬ ಹೆಸರಿನ ಅಕ್ರಮ ರೆಸಾರ್ಟ್ ಅನ್ನು ನಿರ್ಮಿಸಲಾಗಿದ್ದು, ಈ ರೆಸಾರ್ಟ್ ನಿರ್ಮಾಣದ ಸಂದರ್ಭದಲ್ಲಿ 30 ಮತ್ತು 78 ರಲ್ಲಿನ ಸರ್ಕಾರಿ ಹಳಗಳನ್ನು ಮುಚ್ಚಿ ಅದರ ಮೇಲೆ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ಸರ್ವೆ ನಂಬರ್ 30 ಮತ್ತು 78 ರಲ್ಲಿ ಸರ್ಕಾರಿ ಹಳ್ಳ ಹಾದು ಹೋಗಿರುವುದು ಗ್ರಾಮ ನಕಾಶೆಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಹಾಗೂ ಆರ್ಕಾವತಿ ನದಿ ಕಾಲುವೆಯನ್ನು ಮುಚ್ಚಿ ಅದರ ಮೇಲೆ ರೆಸಾರ್ಟ್‌ನ್ನು ನಿರ್ಮಿಸಿ ಅಕ್ರಮವಾಗಿ ತಮ್ಮ ರೆಸಾರ್ಟ್ ಗೆ ರಸ್ತೆ ನಿರ್ಮಿಸಿಕೊಂಡಿರುತ್ತಾರೆ.
ನದಿ ಕಾಲುವೆ ಹಾಗೂ ಸರ್ಕಾರಿ ಹಳ್ಳಗಳನ್ನು ಮುಚ್ಚಿರುವುದರಿಂದ ಗ್ರಾಮೀಣ ಭಾಗದ ನೀರಿನ ಮೂಲಗಳಾದ ಕೆರೆ, ಕುಂಟೆಗಳು ಬತ್ತು ಹೋಗಿವೆ. ಅಲ್ಲದ ಗ್ರಾಮೀಣ ಹಸಿರು ಪರಿಸರದಲ್ಲಿ ಅನಧಿಕೃತವಾಗಿ ಚಟುವಟಿಕೆಗಳಿಂದಾಗಿ ಸುತ್ತಮುತ್ತಲಿನ ಪರಿಸರ ಮಾಲಿನ್ಯಗೊಳ್ಳುತ್ತಿದೆ.
ಹೀಗೆ ನೈಸರ್ಗಿಕವಾಗಿ ಹರಿಯುತ್ತಿರುವ ಅರ್ಕಾವತಿ ನದಿ ಕಾಲುವೆಯನ್ನು ಮುಚ್ಚಿ ರಸ್ತೆ ನಿರ್ಮಿಸಿಕೊಂಡಿರುವುದು, ಗ್ರಾಮದ ಸರ್ಕಾರಿ ಹಳ್ಳಗಳನ್ನು ಮುಚ್ಚಿರುವುದು, ಕೃಷಿ ಬಳಕೆಯ ಭೂಮಿಯನ್ನು ಭೂಪರಿವರ್ತನೆ ಮಾಡಿಸದೇ ವಾಣಿಜ್ಯ ಉದ್ದೇಶಿತ ಚಟುವಟಿಕೆಗಳಿಗೆ ಬಳಸುತ್ತಿರುವುದು, ಸರ್ಕಾರಿ ಗೋಮಾಳ ಭೂಮಿಯನ್ನು ಕಬಳಿಕೆ ಮಾಡಿಕೊಂಡು, ಗ್ರಾಮದ ಬಡ ದಲಿತ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು, ಹಾಗೂ ಸ್ವಚ್ಚವಾದ ನೈಸರ್ಗಿಕ ಪರಿಸರವನ್ನು ಮಾಲಿನ್ಯಗೊಳಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಹಾಗಾಗಿ ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ಆಸ್ತಿ-ಪಾಸ್ತಿಗಳ ರಕ್ಷಣೆ, ಪರಿಸರ ಸಂರಕ್ಷಣೆ, ಹಾಗೂ ಸಾರ್ವಜನಿಕರ ಹಿತ ಕಾಪಾಡುವುದರ ಜೊತೆಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೂ ದೂರು ನೀಡಲಾಗಿದೆ ಎಂದವರು ತಿಳಿಸಿದ್ದಾರೆ.
ಈ ವೇಳೆ ಬೆಂಗಳೂರು ಮಹಾನಗರ ಯುವ ಜನತಾದಳದ ಅಧ್ಯಕ್ಷ ಎ.ಎಂ.ಪ್ರವೀಣ್ ಕುಮಾರ್, ಉಪಾಧ್ಯಕ್ಷ ಎಸ್.ಹರೀಶ್, ಮೆಳೇಕೋಟೆ ಗ್ರಾಮಪಂಚಾಯಿತಿ ಸದಸ್ಯ ಸಿ.ಪಿ.ಜಯಣ್ಣ, ಡಿ.ಎಸ್.ಎಸ್ ಹರ್ಷ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..