ಬೆಂಗಳೂರು: ಸರ್ಕಾರದ ನಿರ್ದೇಶನದಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಲಾದ ಪಡಿತರಚೀಟಿ ಫಲಾನುಭವಿಗಳನ್ನು ಹೊರತು ಪಡಿಸಿ ಉಳಿದಿರುವ ಫಲಾನುಭವಿಗಳ ಇ-ಕೆವೈಸಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ತಿಂಗಳ ಒಂದರಿಂದ 10ರ ವರೆಗೆ ಮರು ನಡೆಸಲಾಗುತ್ತಿದೆ ಎಂದು ದೊಡ್ಡಬಳ್ಳಾಪುರ ತಾಲೂಕು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಶಿರಸ್ತೆಧಾರ್ ರಮೇಶ್ ಅವರು ತಿಳಿಸಿದ್ದಾರೆ.
ಈ ಕುರಿತು ಹರಿತಲೇಖನಿಗೆ ಮಾಹಿತಿ ನೀಡಿರುವ ಅವರು, ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ನೀಡಬೇಕಾಗಿರುವುದರಿಂದ ಪಡಿತರ ಚೀಟಿಗಳಲ್ಲಿನ ಕುಟುಂಬದ ಮುಖ್ಯಸ್ಥ, ಸಂಬಂಧ, ಲಿಂಗ, ಜಾತಿ, ಎಲ್.ಪಿ.ಜಿ.ವಿವರ, ಮೊಬೈಲ್ ಸಂಖ್ಯೆ ತುರ್ತಾಗಿ ಸಂಗ್ರಹಿಸಬೇಕಾಗಿರುತ್ತದೆ. ಆದ್ದರಿಂದ ಚಾಲ್ತಿಯಲ್ಲಿರುವ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳ ಇ-ಕೆವೈಸಿ ನೀಡಲು ಸಂಬಂಧಪಟ್ಟ ನ್ಯಾಯ ಬೆಲೆ ಅಂಗಡಿಗೆ ತೆರಳಿ ಮಾಡಿಸಬೇಕು.
ಪ್ರಸ್ತುತ ತಾಲೂಕಿನಲ್ಲಿ ಶೇ.20 ರಷ್ಟು ಇ-ಕೆವೈಸಿ ಕಾರ್ಯ ಬಾಕಿ ಉಳಿದಿದೆ ಎಂದಿರುವ ಅವರು, ನ್ಯಾಯಬೆಲೆ ಅಂಗಡಿಗಳ ಮುಂಬಾಗ ಪಟ್ಟಿ ಲಗತ್ತಿಸುತ್ತಿದ್ದು, ಪಟ್ಟಿಯಲ್ಲಿರುವವರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸುವಂತೆ ತಿಳಿಸಿದ್ದಾರೆ.
2020ರ ಫೆಬ್ರವರಿ ನಂತರ ವಿತರಿಸಿರುವ ಹೊಸ ಹಾಗೂ ಜಿ.ಎಸ್.ಸಿ(ತಿದ್ದುಪಡಿ) ಮಾಡಲಾದ ಪಡಿತರ ಚೀಟಿಗಳನ್ನು ಬಿಟ್ಟು ಮೊದಲ ಹಂತದಲ್ಲಿ ಇ-ಕೆವೈಸಿ ಮಾಡದಿರುವ ಅಂತ್ಯೋದಯ, ಆದ್ಯತಾ (ಬಿಪಿಎಲ್) ಹಾಗೂ ಆದ್ಯತೇತರ ಪಡಿತರ ಚೀಟಿಗಳಿಗೆ ಇ-ಕೆವೈಸಿ ಕಡ್ಡಾಯವಾಗಿ ಮಾಡಲೇ ಬೇಕಾಗಿದ್ದು ಇ-ಕೆವೈಸಿ ನೀಡಲು ಯಾವುದೇ ಶುಲ್ಕವಿರುವುದಿಲ್ಲ ಹಾಗೂ ಉಚಿತವಾಗಿ ಮಾಡಲು ಕ್ರಮ ವಹಿಸಲಾಗಿದೆ.
ಇ-ಕೆವೈಸಿ ಸಂಗ್ರಹಣೆಗೆ ಯಾರಾದರೂ ಹಣ ಕೇಳಿದಲ್ಲಿ ಅಥವಾ ದೂರುಗಳಿದ್ದರೆ ಹಾಗೂ ಹೆಚ್ಚಿನ ಮಾಹಿತಿ ಬೇಕಾಗಿದಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಗೆ ದೂರು ನೀಡಲು ರಮೇಶ್ ಅವರು ಮನವಿ ಮಾಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..