ಬೆಂ.ಗ್ರಾ.ಜಿಲ್ಲೆ: ಕನ್ನಡ ನಾಡು, ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿಯ ಚರಿತ್ರೆಯನ್ನು ಅನ್ಯಭಾಷಿಕರಿಗೆ ತಿಳಿಸಿ, ಕನ್ನಡ ಭಾಷೆ ಕಲಿಸುವುದರ ಮೂಲಕ ಭಾಷೆಯನ್ನು ಶ್ರೀಮಂತಗೊಳಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಂತರರಾಷ್ಟ್ರೀಯ ಲಯನ್ಸ್ ಕ್ಲಬ್ 317 ಎಫ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕನ್ನಡ ಬಾರದವರಿಗೆ ಹಾಗೂ ಅನ್ಯ ಭಾಷಿಕರಿಗೆ “ಕನ್ನಡ ಕಲಿಯಿರಿ – ಕಲಿಸಿರಿ” ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಕಲಿಯುವುದು ಹಾಗೂ ಕಲಿಸುವ ಪ್ರಕ್ರಿಯೆ ನಮ್ಮಿಂದಲೇ ಪ್ರಾರಂಭವಾಗಬೇಕು. ಅನ್ಯ ಭಾಷಿಕರು ರಾಜ್ಯದಲ್ಲಿ ನೆಲೆಸಿ, ಇಲ್ಲಿನ ಎಲ್ಲಾ ಸೌಲಭ್ಯಗಳನ್ನು ಪಡೆದರೂ ಸಹ ಈ ನೆಲದ ಭಾಷೆಯನ್ನು ಕಲಿಯಲು ಸಾಧ್ಯವಾಗಿಲ್ಲ, ಬದಲಿಗೆ ಕನ್ನಡಿಗರೇ ಬೇರೆ ಭಾಷೆಯಲ್ಲಿ ಸಂವಹನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಗಡಿ ಜಿಲ್ಲೆಯಲ್ಲಿ ಕನ್ನಡವನ್ನು ಪ್ರೀತಿಸುವ ಹಾಗೂ ಆರಾಧಿಸುವುದನ್ನು ನಾವು ಗಮನಿಸಬೇಕು, ಕನ್ನಡ ಭಾಷೆ ಹಾಗೂ ಸಾಹಿತ್ಯ ಅಧ್ಯಯನದಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಬಹುದು, ಮುಂದಿನ ದಿನಗಳಲ್ಲಿ ಸ್ಥಳೀಯ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಪ್ರಮುಖ ಕಲಾ ತಂಡಗಳನ್ನು ಕರೆಸಿ ನಮ್ಮ ಸಂಸ್ಕೃತಿಯನ್ನು ಅನಾವರಣಗೊಳಿಸಲಾಗುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ವಿಜಯಾ.ಈ.ರವಿಕುಮಾರ್ ಮಾತನಾಡಿ, ಭಾಷೆಯೆಂಬುದು ಸಂವಹನ ಮಾಧ್ಯಮವಾಗಿದೆ, ಎಲ್ಲರೂ ಇಚ್ಛೆಪಟ್ಟು ಕಲಿಯಬೇಕು, ತಾಯಿ ಭಾಷೆಯಾದ ಕನ್ನಡವನ್ನು ಹೆಚ್ಚು ಹೆಚ್ಚು ಬಳಸಬೇಕು, ನಮ್ಮ ಸುತ್ತ-ಮುತ್ತಲಿನ ಪರಿಸರದಲ್ಲಿ ಕನ್ನಡದ ಕಂಪನ್ನು ಪಸರಿಸುವ ಮೂಲಕ ಕನ್ನಡವನ್ನು ಶ್ರೀಮಂತವಾಗಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ನಾವು ಯಾವುದೇ ಒಂದು ಪ್ರದೇಶದಲ್ಲಿ ನೆಲೆಸಿ ಅಲ್ಲಿನ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ ಎಂದರೆ ನಾವು ಅಲ್ಲಿನ ಭಾಷೆಯನ್ನು ಕಲಿಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ, ಲಯನ್ಸ್ ಕ್ಲಬ್ ಉತ್ತಮ ಯೋಜನೆಯೊಂದಿಗೆ ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸುವ ಕಾರ್ಯ ಮಾಡುತ್ತಿದೆ, ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಕ್ರಮಗಳು ನಡೆಯಬೇಕು ಇದಕ್ಕೆ ಅಗತ್ಯವಾದ ಸಹಕಾರ ನೀಡಲಾಗುವುದು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ, ಜಿಲ್ಲಾ ಲಯನ್ಸ್ 317 ಎಫ್ ಹಾಗೂ ಎಂಜೆಎಫ್ ಜಿಲ್ಲಾ ರಾಜ್ಯಪಾಲರಾದ ಲಯನ್ ಮನೋಹರ್ ನಂಬಿಯಾರ್ ಮಾತನಾಡಿ, ಲಯನ್ಸ್ ಕ್ಲಬ್ ನಲ್ಲಿ ಕನ್ನಡ ಮಾತನಾಡದಂತಹ ಸ್ಥಿತಿ ಇತ್ತು ಆದರೆ ಪ್ರಸ್ತುತ ದಿನಗಳಲ್ಲಿ ಲಯನ್ಸ್ ಕ್ಲಬ್‌ನಲ್ಲಿ ಅನ್ಯಭಾಷಿಕರಿಗೆ ಕನ್ನಡವನ್ನು ಕಲಿಸುವ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಅದಕ್ಕಾಗಿಯೇ ಲಯನ್ಸ್ ಕ್ಲಬ್‌ನ ಬಜೆಟ್‌ನಲ್ಲಿ ಹಣವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಇರುವಂತಹ ಭಾಷಾ ಸ್ನೇಹದ ವಾತಾವರಣ ಬೇರೆ ರಾಜ್ಯಗಳಲ್ಲಿ ನೋಡಿಲ್ಲ., ಪ್ರತೀ ವರ್ಷ ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಕನ್ನಡವನ್ನು ಕಲಿಸುವ ಕೆಲಸವಾಗುತ್ತಿದೆ, ಅನ್ಯ ಭಾಷೆಯ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಕನ್ನಡ ವರ್ಣಮಾಲೆಯನ್ನು ಒಳಗೊಂಡ ಪುಸ್ತಕವನ್ನು ನೀಡುವ ಮೂಲಕ ಕನ್ನಡ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲಾಗುತ್ತಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ, ಜಿಲ್ಲಾ 317 ಎಫ್ ಹಾಗೂ ಎಂಜೆಎಫ್ ಸದಸ್ಯರಾದ ಲಯನ್ ಡಾ.ಹುಲಿಕಲ್ ನಟರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆಯು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿದೆ, ಅನೇಕ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ಭಾಷೆ ಹಾಗೂ ಆಸ್ಮಿತೆಗಾಗಿ ಹೋರಾಡಿದ್ದಾರೆ, ಆದರೆ ಇಂದು ಕನ್ನಡ ಭಾಷೆ ಮಾರುಕಟ್ಟೆ ಸರಕಾಗಿದೆ ಎಂದರು.
ಕನ್ನಡಕ್ಕೆ ಈಗಾಗಲೇ 8 ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ, ರಾಷ್ಟ್ರಕವಿ ಕುವೆಂಪು ಅವರು ರಾಮಾಯಣವನ್ನು ಕನ್ನಡದಲ್ಲೇ ರಚಿಸಿದ್ದಾರೆ, ಇಂತಹ ಶ್ರೀಮಂತ ಭಾಷೆಯ ಆಸ್ಮಿತೆಯನ್ನು ಉಳಿಸುವುದು ಮುಖ್ಯವಾಗಿದೆ, ಜಿಲ್ಲೆಯ 317 ಎಫ್ ಕ್ಲಬ್‌ನಲ್ಲಿ 6000 ಅನ್ಯಭಾಷಿಕರಿದ್ದು ಅವರಿಗೆ ಪ್ರತೀ ಶನಿವಾರ ಕನ್ನಡ ಕಲಿಸುವ ಕೆಲಸವಾಗುತ್ತಿದೆ, ಮುಂದಿನ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಕಲಾವಿದರನ್ನು ಕರೆಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅನ್ಯ ಭಾಷೆಯ ಶಾಲೆಗಳ ಮಕ್ಕಳಿಗೆ ವಿತರಿಸಲು ಕನ್ನಡ ವರ್ಣಮಾಲೆಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಆರಾದ್ಯ, ಕನ್ನಡ ಮತ್ತು ಸಂಸ್ಕೃತಿ, 317ಎಫ್ ಸಂಚಾಲಕರಾದ ಲಯನ್ ಆರ್.ಕೆ.ಹೆಗ್ಗಡೆ, ಜಿಲ್ಲಾ 317ಎಫ್ ಸದಸ್ಯರಾದ ಲಯನ್ ಭಾಗ್ಯ ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..